Police Roundup

ಶಿವಂ ಅಸೋಸಿಯೇಟ್ಸ್ ವಂಚನೆ ಪ್ರಕರಣ: ನೀಲಣ್ಣವರ ಬಳಿ ಕಾರು ಗಿಫ್ಟ್ ಪಡೆದ ಕರವೇ ಜಿಲ್ಲಾಧ್ಯಕ್ಷನಿಗೆ ಸಿಐಡಿ ನೋಟಿಸ್!

Share News

ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿರುವ ‘ಶಿವಂ ಅಸೋಸಿಯೇಟ್ಸ್’ ಸಂಸ್ಥೆಯ ಬಹುಕೋಟಿ ಠೇವಣಿ ವಂಚನೆ ಪ್ರಕರಣದ ತನಿಖೆಯನ್ನು ಸಿಐಡಿ (CID) ಅಧಿಕಾರಿಗಳು ಮತ್ತಷ್ಟು ಚುರುಕುಗೊಳಿಸಿದ್ದಾರೆ. ಇದರ ಬೆನ್ನಲ್ಲೇ, ಪ್ರಕರಣದ ಮುಖ್ಯ ಆರೋಪಿಯಿಂದ ಐಷಾರಾಮಿ ಕಾರನ್ನು ಉಡುಗೊರೆಯಾಗಿ ಪಡೆದ ಆರೋಪದ ಮೇಲೆ ಕರವೇ (ಪ್ರವೀಣ್ ಶೆಟ್ಟಿ ಬಣ) ಬೆಳಗಾವಿ ಜಿಲ್ಲಾಧ್ಯಕ್ಷ ಆರ್. ಅಭಿಲಾಷ್ ಅವರಿಗೆ ಸಿಐಡಿ ಅಧಿಕಾರಿಗಳು ಅಧಿಕೃತ ನೋಟಿಸ್‌ ಜಾರಿ ಮಾಡಿದ್ದಾರೆ.

 

ಶಿವಂ ಅಸೋಸಿಯೇಟ್ಸ್ ಸಂಸ್ಥೆಯ ಬಂಡವಾಳ ಹೂಡಿಕೆ ಹಾಗೂ ಠೇವಣಿದಾರರ ಕೋಟ್ಯಂತರ ರೂಪಾಯಿ ಹಣ ದುರುಪಯೋಗ ಆರೋಪದ ತನಿಖೆ ನಡೆಸುತ್ತಿರುವ ಸಿಐಡಿಗೆ ಮಹತ್ವದ ಸುಳಿವು ಸಿಕ್ಕಿದೆ. ಸಂಸ್ಥೆಯ ಮುಖ್ಯಸ್ಥ ಶಿವಾನಂದ ನೀಲಣ್ಣವರ ಅವರು ಕರವೇ ಜಿಲ್ಲಾಧ್ಯಕ್ಷ ಆರ್. ಅಭಿಲಾಷ್ ಅವರಿಗೆ ಐಷಾರಾಮಿ ಕಾರೊಂದನ್ನು ಉಡುಗೊರೆಯಾಗಿ (Gift) ನೀಡಿದ್ದರು ಎನ್ನಲಾಗಿದೆ.

​ಈ ಹಿನ್ನೆಲೆಯಲ್ಲಿ ಆ ಕಾರಿನ ಖರೀದಿ ಮೂಲ ಯಾವುದು? ಅದಕ್ಕೆ ಹಣದ ವ್ಯವಹಾರ ಹೇಗೆ ನಡೆದಿದೆ? ಮತ್ತು ಪ್ರಸ್ತುತ ಅದರ ಬಳಕೆ ಕುರಿತು ಸಂಪೂರ್ಣ ತನಿಖೆ ನಡೆಸಲು ಕಾರಿನ ಸಮೇತ ವಿಚಾರಣೆಗೆ ಹಾಜರಾಗುವಂತೆ ಸಿಐಡಿ ಅಧಿಕಾರಿಗಳು ಅಭಿಲಾಷ್ ಅವರಿಗೆ ಸೂಚನೆ ನೀಡಿದ್ದಾರೆ.

 

ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮುಖ್ಯ ಆರೋಪಿ ಶಿವಾನಂದ ನೀಲಣ್ಣವರ ಅವರಿಗೆ ಸೇರಿದ ಹಲವು ಬ್ಯಾಂಕ್ ಖಾತೆಗಳನ್ನು ಸಿಐಡಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಸಾರ್ವಜನಿಕರಿಂದ ದೊಡ್ಡ ಪ್ರಮಾಣದಲ್ಲಿ ಠೇವಣಿ ಸಂಗ್ರಹಿಸಿ ನಂಬಿಕೆ ದ್ರೋಹ ಎಸಗಿರುವ ಹಿನ್ನೆಲೆಯಲ್ಲಿ, ಕೋಟ್ಯಂತರ ರೂಪಾಯಿ ಹಣದ ಹರಿವಿನ ದಾಖಲೆಗಳನ್ನು ಅಧಿಕಾರಿಗಳ ತಂಡ ತೀವ್ರ ಪರಿಶೀಲನೆಗೆ ಒಳಪಡಿಸಿದೆ.

 

ವಂಚನೆ ಹಣದ ಮೂಲಕ ಶಿವಾನಂದ ನೀಲಣ್ಣವರ ಅವರು ಜಿಲ್ಲೆಯ ಹಲವು ಗಣ್ಯರು, ವಿವಿಧ ಸಂಘಟನೆಗಳ ಮುಖಂಡರು ಹಾಗೂ ಪ್ರಭಾವಿ ವ್ಯಕ್ತಿಗಳಿಗೆ ಬೆಲೆಬಾಳುವ ಉಡುಗೊರೆಗಳು, ವಾಹನ ಹಾಗೂ ಆಸ್ತಿಗಳನ್ನು ನೀಡಿರುವ ಶಂಕೆ ವ್ಯಕ್ತವಾಗಿದೆ. ಈ ಕುರಿತು ಸಿಐಡಿ ಸದ್ಯ ಮಾಹಿತಿ ಕಲೆಹಾಕುತ್ತಿದ್ದು, ಮುಂಬರುವ ದಿನಗಳಲ್ಲಿ ಇನ್ನಷ್ಟು ಪ್ರಭಾವಿಗಳಿಗೆ ನೋಟಿಸ್ ಜಾರಿಯಾಗುವ ಸಾಧ್ಯತೆ ದಟ್ಟವಾಗಿದೆ ಎಂದು ನಂಬಲರ್ಹ ಮೂಲಗಳು ತಿಳಿಸಿವೆ.

 


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin