ವಿಜಯಪುರ: ಮದುವೆಗೆ ಹೆಣ್ಣು ಸಿಗುತ್ತಿಲ್ಲ ಎಂಬ ಕಾರಣಕ್ಕೆ ಯುವಕನೊಬ್ಬ ಮೊಬೈಲ್ ಟವರ್ ಏರಿ ಭಾರಿ ಹೈಡ್ರಾಮಾ ಸೃಷ್ಟಿಸಿರುವ ವಿಲಕ್ಷಣ ಘಟನೆ ಜಿಲ್ಲೆಯ ತಿಕೋಟಾ ತಾಲೂಕಿನ ಕೋಟ್ಯಾಳ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿವಾಸಿಯಾದ ಶ್ರೀಶೈಲ ನಾಗಪ್ಪ ರಾಮತೀರ್ಥ ಎಂಬಾತನೇ ಗ್ರಾಮಸ್ಥರು ಹಾಗೂ ಪೊಲೀಸರಿಗೆ ಬೆವರಿಳಿಸಿದ ಕಿರಿಕ್ ಯುವಕ.
ವಯಸ್ಸು ಮೀರುತ್ತಿದ್ದರೂ ತನಗೆ ಮದುವೆ ಮಾಡಲು ಪೋಷಕರು ಸರಿಯಾದ ಹೆಣ್ಣು ಹುಡುಕುತ್ತಿಲ್ಲ ಹಾಗೂ ಮದುವೆಗೆ ಹೆಣ್ಣು ಸಿಗುತ್ತಿಲ್ಲ ಎಂಬ ಬೇಸರದಿಂದ ಶ್ರೀಶೈಲ ದಿಢೀರನೆ ಗ್ರಾಮದ ಮೊಬೈಲ್ ಟವರ್ ಏರಿದ್ದಾನೆ. ತನಗೆ ಮದುವೆ ಮಾಡಿಸಲೇಬೇಕು ಎಂದು ಟವರ್ ಮೇಲಿಂದಲೇ ಪಟ್ಟು ಹಿಡಿದಿದ್ದಾನೆ. ಇದನ್ನು ಕಂಡು ಗಾಬರಿಗೊಂಡ ಗ್ರಾಮಸ್ಥರು ತಕ್ಷಣವೇ ತಿಕೋಟಾ ಪೊಲೀಸ್ ಠಾಣೆ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಧಾವಿಸಿದ ತಿಕೋಟಾ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ, ಟವರ್ ಕೆಳಗಡೆ ಜನ ಸೇರದಂತೆ ಮುನ್ನೆಚ್ಚರಿಕೆ ವಹಿಸಿದರು. ಬಳಿಕ ಯುವಕನಿಗೆ ಸೂಕ್ತ ರೀತಿಯಲ್ಲಿ ಬುದ್ಧಿವಾದ ಹೇಳಿ, ಆತನ ಮನವೋಲಿಸುವಲ್ಲಿ ಯಶಸ್ವಿಯಾದರು. ಸುಮಾರು ಹೊತ್ತಿನ ಹರಸಾಹಸದ ಬಳಿಕ ಯುವಕನನ್ನು ಸುರಕ್ಷಿತವಾಗಿ ಕೆಳಗಿಳಿಸಲಾಗಿದ್ದು, ಇಡೀ ಗ್ರಾಮಸ್ಥರು ನಿಟ್ಟುಸಿರು ಬಿಡುವಂತಾಗಿದೆ.
ಈ ಯುವಕ ಇಂತಹ ಕಿರಿಕ್ ಮಾಡುತ್ತಿರುವುದು ಇದೇ ಮೊದಲೇನಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಈ ಹಿಂದೆ ಒಮ್ಮೆ ಮದ್ಯ (ಎಣ್ಣೆ) ಬೇಕೆಂದು ಹಾಗೂ ಮತ್ತೊಮ್ಮೆ ಗುಟಕಾ ಬೇಕೆಂದು ಹಠ ಹಿಡಿದು ಇದೇ ರೀತಿ ಮೊಬೈಲ್ ಟವರ್ ಏರಿ ರಂಪಾಟ ಮಾಡಿದ್ದನಂತೆ. ಆಗಲೂ ಪೊಲೀಸರು ಬಂದು ಆತನಿಗೆ ಬೇಕಾದ್ದನ್ನು ಕೊಡಿಸುವುದಾಗಿ ನಂಬಿಸಿ ಕೆಳಗಿಳಿಸಿದ್ದರು.
ಪದೇ ಪದೇ ಸಣ್ಣಪುಟ್ಟ ವಿಷಯಗಳಿಗೂ ಮೊಬೈಲ್ ಟವರ್ ಏರಿ ಸಾರ್ವಜನಿಕವಾಗಿ ಹಾಗೂ ಇಲಾಖೆಗಳಿಗೆ ಕಿರಿಕಿರಿ ಉಂಟುಮಾಡುತ್ತಿರುವ ಈ ಯುವಕನ ವರ್ತನೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಪೊಲೀಸರು ಆತನಿಗೆ ಎಚ್ಚರಿಕೆ ನೀಡಿದ್ದಾರೆ.