ಬೆಂಗಳೂರು: ದೇಶದ ಅತ್ಯುನ್ನತ ನ್ಯಾಯಾಲಯವಾದ ಸುಪ್ರೀಂ ಕೋರ್ಟ್ ಹೆಸರಲ್ಲೇ ನಕಲಿ ದಾಖಲೆ ಹಾಗೂ ಮುದ್ರೆ ಸೃಷ್ಟಿಸಿ, ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಕರಡುಗಟ್ಟಿದ ಅಪರಾಧಿಯೊಬ್ಬ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ರಾಜಾರೋಷವಾಗಿ ಬಿಡುಗಡೆಯಾಗಿ ಪರಾರಿಯಾಗಿರುವ ಆಘಾತಕಾರಿ ಹಗರಣ ಬೆಳಕಿಗೆ ಬಂದಿದೆ.
ಕಿಡ್ನ್ಯಾಪ್ ಮತ್ತು ದರೋಡೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಶಂಕರ್ ಎ ತಂದೆ ಆರ್ಮುಗಂ (ಶಿಕ್ಷಾ ಬಂದಿ ಸಂಖ್ಯೆ: 12503) ಎಂಬಾತನೇ ಜೈಲಾಧಿಕಾರಿಗಳ ಕಣ್ಣಿಗೆ ಮಣ್ಣೆರಚಿ ನಕಲಿ ಆದೇಶದ ಮೂಲಕ ಜೈಲಿನಿಂದ ಹೊರನಡೆದ ಖದೀಮ. ಪ್ರಸ್ತುತ ಈ ಹೈಪ್ರೊಫೈಲ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಹೊಸ ಕ್ರಿಮಿನಲ್ ಮುಕದ್ದಮೆ ದಾಖಲಾಗಿದ್ದು, ತನಿಖೆ ತೀವ್ರಗೊಂಡಿದೆ.
ಕಳೆದ 2001ರಲ್ಲಿ ಬೆಂಗಳೂರಿನ ತ್ವರಿತ ವಿಲೇವಾರಿ ನ್ಯಾಯಾಲಯ-1ರಲ್ಲಿ ನಡೆದಿದ್ದ ಭೀಕರ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಶಂಕರ್ ವಿರುದ್ಧ ಕಲಂ 364ಎ (ಹಣಕ್ಕಾಗಿ ಅಪಹರಣ) ಮತ್ತು 120ಬಿ (ಅಪರಾಧ ಸಂಚು) ಅಡಿಯಲ್ಲಿ ಸಾಬೀತಾದ ಅಪರಾಧಕ್ಕಾಗಿ ಮಾನ್ಯ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿತ್ತು. ಅಂದಿನಿಂದ ಈತ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿದ್ದನು.
ವರ್ಷಗಳು ಉರುಳುತ್ತಿದ್ದಂತೆ ಜೈಲಿನಿಂದ ಹೊರಬರಲು ಆರೋಪಿ ಮತ್ತು ಆತನ ಗ್ಯಾಂಗ್ ಸ್ಕೆಚ್ ಹಾಕಿತ್ತು. ದಿನಾಂಕ 13-11-2018 ರಂದು ಪರಪ್ಪನ ಅಗ್ರಹಾರ ಜೈಲಿನ ಕಛೇರಿಗೆ ನವದೆಹಲಿಯ ಸುಪ್ರೀಂ ಕೋರ್ಟ್‌ನಿಂದ ಬಂದಿದೆ ಎನ್ನಲಾದ ಅಧಿಕೃತ ಪತ್ರವೊಂದು ತಲುಪಿತ್ತು. ಕ್ರಿಮಿನಲ್ ಅಪೀಲು ಸಂಖ್ಯೆ: 6447/2014ರ ಅಡಿಯಲ್ಲಿ ಬಂದಿದ್ದ ಸದರಿ ಆದೇಶದ ಪತ್ರದಲ್ಲಿ “ಖೈದಿ ಶಂಕರ್‌ನನ್ನು ತಕ್ಷಣ ಬಿಡುಗಡೆ ಮಾಡಿ” ಎಂದು ಉಲ್ಲೇಖಿಸಲಾಗಿತ್ತು.
ಇದನ್ನು ನೈಜ ಆದೇಶವೆಂದು ನಂಬಿದ ಜೈಲಾಧಿಕಾರಿಗಳು, ಅಂದೇ ಸಜಾ ಬಂದಿ ಶಂಕರ್‌ನಿಂದ ಹತ್ತು ಸಾವಿರ ರೂಪಾಯಿ ದಂಡ ಕಟ್ಟಿಸಿಕೊಂಡು ಆತನನ್ನು ಬಿಡುಗಡೆ ಮಾಡಿದ್ದರು. ಜೈಲಿನಿಂದ ಆಚೆ ಬಂದಿದ್ದ ಅಪರಾಧಿ ಯಾರಿಗೂ ಸಿಗದೆ ತಲೆಮರೆಸಿಕೊಂಡಿದ್ದನು.
ಎಲ್ಲವೂ ಸುಸೂತ್ರವಾಗಿ ಮುಗಿಯಿತು ಎನ್ನುವಷ್ಟರಲ್ಲಿ, ಜೈಲು ಮತ್ತು ಸುಧಾರಣಾ ಸೇವೆಗಳ ಮಹಾನಿರ್ದೇಶಕರ ಕಛೇರಿಗೆ ಈ ಬಿಡುಗಡೆಯ ಹಿಂದೆ ದೊಡ್ಡ ಜಾಲ ಕೆಲಸ ಮಾಡಿದೆ ಎಂಬ ಅನುಮಾನಾಸ್ಪದ ಅನಾಮಧೇಯ ದೂರು ಅರ್ಜಿ ಬಂದಿದೆ. ತಕ್ಷಣ ಎಚ್ಚೆತ್ತುಕೊಂಡ ಮಹಾನಿರ್ದೇಶಕರು ಇಲಾಖಾ ತನಿಖೆಗೆ ಆದೇಶಿಸಿದ್ದರು. ಕಾರಾಗೃಹಗಳ ಉಪಮಹಾನಿರೀಕ್ಷಕರು (ದಕ್ಷಿಣ ವಲಯ) ನೇತೃತ್ವದಲ್ಲಿ ದಾಖಲೆಗಳ ಪರಿಶೀಲನೆ ಆರಂಭವಾಯಿತು.
ದಾಖಲೆಗಳ ನೈಜತೆಯನ್ನು ಪರಿಶೀಲಿಸಲು ಜೈಲಾಧಿಕಾರಿಗಳು ನವದೆಹಲಿಯ ಸುಪ್ರೀಂ ಕೋರ್ಟ್‌ನ ಸಹಾಯಕ ರಿಜಿಸ್ಟ್ರಾರ್ (Assistant Registrar) ಅವರಿಗೆ ಪತ್ರ ಬರೆದು ವಿಚಾರಿಸಿದಾಗ ಇಡೀ ಇಲಾಖೆಯೇ ಬೆಚ್ಚಿಬೀಳುವ ಸತ್ಯ ಹೊರಬಂದಿದೆ. ಸುಪ್ರೀಂ ಕೋರ್ಟ್ ಅಂತಹ ಯಾವುದೇ ಬಿಡುಗಡೆ ಆದೇಶವನ್ನು ನೀಡಿರಲಿಲ್ಲ. ಅಧಿಕಾರಿಗಳ ಕೈ ಸೇರಿದ್ದ ಜಂಟಿ ಸಹಿ ಮತ್ತು ಮುದ್ರೆಯುಳ್ಳ ಆ ಆರ್ಡರ್ ಕಾಪಿ ಶೇ. 100 ರಷ್ಟು ನಕಲಿ (Forgery) ಎಂಬುದು ದೃಢಪಟ್ಟಿದೆ.
ದೇಶದ ಸರ್ವೋಚ್ಚ ನ್ಯಾಯಾಲಯದ ಹೆಸರನ್ನೇ ಬಳಸಿ ವಂಚಿಸಿರುವ ಈ ವ್ಯವಸ್ಥಿತ ಸಂಚಿನ ಹಿಂದೆ ಜೈಲಿನ ಒಳಗಿನ ಹಾಗೂ ಹೊರಗಿನ ಪ್ರಭಾವಿ ವ್ಯಕ್ತಿಗಳ ಕೈವಾಡವಿರುವ ಶಂಕೆ ದಟ್ಟವಾಗಿದೆ. ಪ್ರಸ್ತುತ ಪರಪ್ಪನ ಅಗ್ರಹಾರ ಜೈಲಿನ ಪ್ರಭಾರ ಅಧೀಕ್ಷಕರಾದ ಕರ್ಣ ಬಿ ಕ್ಷತ್ರಿ ಅವರು ನೀಡಿದ ದೂರಿನ ಮೇರೆಗೆ ಸಜಾ ಬಂದಿ ಶಂಕರ್ ಹಾಗೂ ಆತನ ಸಹಚರರ ವಿರುದ್ಧ ವಂಚನೆ, ನಕಲಿ ದಾಖಲೆ ಸೃಷ್ಟಿ ಮತ್ತು ಅಕ್ರಮ ಪರಾರಿ ಆರೋಪದಡಿ ಪ್ರಕರಣ ದಾಖಲಾಗಿದೆ.
ಪ್ರಕರಣದ ಗಾಂಭೀರ್ಯತೆಯನ್ನು ಅರಿತು ತನಿಖಾಧಿಕಾರಿ ಮಹಾದೇವಯ್ಯ (PSI) ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ. ಸದ್ಯ ಪೊಲೀಸರ ಮುಂದೆ ಮೂರು ಪ್ರಮುಖ ಸವಾಲುಗಳಿವೆ:
ತಲೆಮರೆಸಿಕೊಂಡಿರುವ ಜೀವಾವಧಿ ಖೈದಿ ಶಂಕರ್‌ನನ್ನು ಮರು-ಬಂಧನ ಮಾಡುವುದು.
ಸುಪ್ರೀಂ ಕೋರ್ಟ್‌ನ ನಕಲಿ ದಾಖಲೆ ಸೃಷ್ಟಿಸಿದ ಸೂತ್ರಧಾರಿ (Kingpin) ಯಾರು ಎಂಬುದನ್ನು ಪತ್ತೆ ಹಚ್ಚುವುದು.
ಈ ಹೈಟೆಕ್ ವಂಚನೆಗೆ ಜೈಲಿನ ಒಳಗಿನ ಸಿಬ್ಬಂದಿ ಯಾರಾದರೂ ಶಾಮೀಲಾಗಿದ್ದಾರೆಯೇ ಎಂಬ ಬಗ್ಗೆ ಬೇರು ಮಟ್ಟದ ತನಿಖೆ ನಡೆಸುವುದು.
ಕಾನೂನಿನ ಮುದ್ರೆಯನ್ನೇ ನಕಲು ಮಾಡಿ ಸಮಾಜಕ್ಕೆ ಸವಾಲು ಹಾಕಿರುವ ಈ ಖದೀಮರ ಜಾಲವನ್ನು ಭೇದಿಸಲು ವಿಶೇಷ ಪೊಲೀಸ್ ತಂಡ ಈಗ ತೀವ್ರ ಶೋಧ ಕಾರ್ಯ ಕೈಗೊಂಡಿದೆ.
ವಿಶೇಷ ತನಿಖಾ ವರದಿ: ಪರಶಿವ ಧನಗೂರು (Udayatv ಶಿವು)