Police Roundup

ಬೆಂಗಳೂರು: ಕೇವಲ ₹800 ಗಾಂಜಾ ಹಣದ ವಿಚಾರಕ್ಕೆ ಆಟೋ ಚಾಲಕನ ಭೀಕರ ಕೊಲೆ; ಶವ ಹೂತು ಎಸ್ಕೇಪ್ ಆಗುತ್ತಿದ್ದ ಹಂತಕರನ್ನು ಲಾಕ್ ಮಾಡಿದ ಬೀಟ್ ಪೊಲೀಸರು!

Share News

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಅಪರಾಧ ಕೃತ್ಯಗಳು ಮಿತಿಮೀರುತ್ತಿದ್ದು, ಕೇವಲ 800 ರೂಪಾಯಿ ಹಣದ ಕ್ಷುಲ್ಲಕ ವಿಚಾರಕ್ಕೆ ಆಟೋ ಚಾಲಕನೊಬ್ಬನನ್ನು ಭೀಕರವಾಗಿ ಕೊಲೆ ಮಾಡಿ, ಶವ ಹೂತಿಟ್ಟಿದ್ದ ಆಘಾತಕಾರಿ ಘಟನೆ ಕುಂಬಳಗೋಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.

​ಕೊಲೆಯಾದ ದುರ್ದೈವಿಯನ್ನು ಆಟೋ ಚಾಲಕ ರಕ್ಷಿತ್ ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹಂತಕರಾದ ಮೋಹ್ಸಿನ್ ಪಾಷಾ ಹಾಗೂ ಹಸನ್ ಎಂಬ ಇಬ್ಬರು ಆರೋಪಿಗಳನ್ನು ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ.

 

ಪೊಲೀಸ್ ಮೂಲಗಳ ಪ್ರಕಾರ, ಕೊಲೆಯಾದ ರಕ್ಷಿತ್ ಹಾಗೂ ಆರೋಪಿಗಳು ಹಳೇ ಪರಿಚಯಸ್ಥರಾಗಿದ್ದು, ಇವರ ನಡುವೆ ಗಾಂಜಾ ವ್ಯವಹಾರ ನಡೆಯುತ್ತಿತ್ತು. ಆರೋಪಿಗಳ ಬಳಿ ರಕ್ಷಿತ್ ಗಾಂಜಾ ಖರೀದಿಸಿ ₹800 ಹಣವನ್ನು ಬಾಕಿ ಉಳಿಸಿಕೊಂಡಿದ್ದನು. ಈ ಬಾಕಿ ಹಣ ನೀಡುವಂತೆ ಆರೋಪಿಗಳು ರಕ್ಷಿತ್ ಜೊತೆ ಜಗಳ ತೆಗೆದಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ತಿರುಗಿದಾಗ, ಆಕ್ರೋಶಗೊಂಡ ಆರೋಪಿಗಳು ರಕ್ಷಿತ್‌ಗೆ ದೊಣ್ಣೆಗಳಿಂದ ಮನಬಂದಂತೆ ಹಲ್ಲೆ ನಡೆಸಿ ಭೀಕರವಾಗಿ ಕೊಲೆ ಮಾಡಿದ್ದಾರೆ.

 

ಕೊಲೆಯಾದ ಬಳಿಕ ಹಂತಕರು ಸಾಕ್ಷ್ಯ ನಾಶಪಡಿಸಲು ಸಂಚು ರೂಪಿಸಿದ್ದರು. ರಕ್ಷಿತ್ ಶವವನ್ನು ಆತನದ್ದೇ ಆಟೋದಲ್ಲಿ ಸಾಗಿಸಿ, ರಾಮಸಂದ್ರ ಬಳಿಯ ಕೆರೆಯ ದಂಡೆಯೊಂದರಲ್ಲಿ ಗುಂಡಿ ತೆಗೆದು ಹೂತು ಹಾಕಿದ್ದರು. ಕೃತ್ಯ ಮುಗಿಸಿ ಏನೂ ತಿಳಿಯದವರಂತೆ ಆಟೋದಲ್ಲಿ ಪರಾರಿಯಾಗಲು ಯತ್ನಿಸುತ್ತಿದ್ದರು.

 

​ರಾತ್ರಿ ವೇಳೆ ಗಸ್ತಿನಲ್ಲಿದ್ದ ಕುಂಬಳಗೋಡು ಠಾಣೆಯ ಬೀಟ್ ಪೊಲೀಸರು ಅನುಮಾನದ ಆಧಾರದ ಮೇಲೆ ಆಟೋವನ್ನು ತಡೆದು ಪರಿಶೀಲಿಸಿದ್ದಾರೆ. ಈ ವೇಳೆ ಆಟೋದ ಮೇಲೆ ರಕ್ತದ ಕಲೆಗಳು ಇರುವುದನ್ನು ಗಮನಿಸಿದ ಪೊಲೀಸರು, ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಪೊಲೀಸರ ಸಾಲು ಸಾಲು ಪ್ರಶ್ನೆಗಳಿಗೆ ತಡಬಡಾಯಿಸಿದ ಆರೋಪಿಗಳು, ಕೊನೆಗೆ ತಾವು ಮಾಡಿದ ಭೀಕರ ಕೊಲೆಯ ರಹಸ್ಯವನ್ನು ಬಾಯ್ಬಿಟ್ಟಿದ್ದಾರೆ.

​ಇದೇ ಸಂದರ್ಭದಲ್ಲಿ ಕೊಲೆಯಾದ ರಕ್ಷಿತ್ ತಾಯಿ ಕೂಡ ಠಾಣೆಗೆ ಬಂದು, “ಹಣದ ವಿಚಾರಕ್ಕೆ ನಿನ್ನ ಮಗನನ್ನು ಹೊಡೆದು ಹಾಕಿದ್ದೇವೆ ಎಂದು ಆತನ ಸ್ನೇಹಿತರು ಹೇಳುತ್ತಿದ್ದಾರೆ” ಎಂದು ದೂರು ನೀಡಿದ್ದರು.

 

ಈ ಭೀಕರ ಕೊಲೆ ಪ್ರಕರಣದ ಕುರಿತು ನೈರುತ್ಯ ವಿಭಾಗದ ಡಿಸಿಪಿ ಅನಿತಾ ಹದ್ದಣ್ಣನವರ್ ಮಾಹಿತಿ ನೀಡಿದ್ದು, “ಆಟೋ ಮೇಲಿದ್ದ ರಕ್ತದ ಕಲೆಯ ಮಾಹಿತಿ ಆಧರಿಸಿ ಪೊಲೀಸರು ತಪಾಸಣೆ ನಡೆಸುತ್ತಿದ್ದರು. ಇದೇ ವೇಳೆ ರಕ್ಷಿತ್ ತಾಯಿ ಕೂಡ ದೂರು ನೀಡಿದ್ದರು. ಹಣದ ವ್ಯವಹಾರದ ಜಗಳದಲ್ಲಿ ರಕ್ಷಿತ್‌ನನ್ನು ಬೇರೊಂದು ಕಡೆ ಕರೆದೊಯ್ದು ಹಲ್ಲೆ ನಡೆಸಿ ಕೊಲೆ ಮಾಡಿ, ಶವವನ್ನು ಗುಂಡಿಯೊಂದರಲ್ಲಿ ಹೂತಿಟ್ಟಿರುವುದು ತನಿಖೆಯಲ್ಲಿ ತಿಳಿದುಬಂದಿದೆ. ಸದ್ಯ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮ ಜರುಗಿಸಲಾಗಿದೆ” ಎಂದು ತಿಳಿಸಿದ್ದಾರೆ.

 


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin