Police Roundup

ಎವರೆಸ್ಟ್ ಶಿಖರದಿಂದ ಶವ ತರಲು ₹1 ಕೋಟಿ ವೆಚ್ಚ!: ಪರ್ವತಾರೋಹಿ ಅರುಣ್ ಕಳೇಬರ ಹಿಮದಲ್ಲೇ ಬಿಡಲು ಕುಟುಂಬದ ಕಣ್ಣೀರಿನ ನಿರ್ಧಾರ!

Share News

ಹೈದರಾಬಾದ್: ವಿಶ್ವದ ಅತ್ಯಂತ ಎತ್ತರದ ಹಿಮಶಿಖರ ಮೌಂಟ್ ಎವರೆಸ್ಟ್ ಏರುವುದು ಪ್ರತಿಯೊಬ್ಬ ಚಾರಣಿಗರ ಜೀವಮಾನದ ದೊಡ್ಡ ಕನಸು. ಆದರೆ, ಈ ಸಾಹಸದ ಹಾದಿಯಲ್ಲಿ ಒಮ್ಮೆ ಜೀವ ಚೆಲ್ಲಿರೆ, ಆ ಮೃತರ ಶವಗಳನ್ನು ಮರಳಿ ತರುವುದು ಕುಟುಂಬದವರಿಗೆ ಮಾತ್ರವಲ್ಲದೆ ರಕ್ಷಣಾ ತಂಡಕ್ಕೂ ಇಡೀ ವಿಶ್ವದಲ್ಲೇ ಅತ್ಯಂತ ದುಬಾರಿ ಮತ್ತು ಪ್ರಾಣಾಂತಿಕ ಸವಾಲಿನ ಕೆಲಸವಾಗಿದೆ.

 

​ಇದೇ ಕಾರಣಕ್ಕೆ, ಇತ್ತೀಚೆಗಷ್ಟೇ ಯಶಸ್ವಿಯಾಗಿ ಎವರೆಸ್ಟ್ ಶಿಖರ ಏರಿ, ಕೆಳಗೆ ಇಳಿಯುವ ವೇಳೆ ದುರದೃಷ್ಟವಶಾತ್ ಮೃತಪಟ್ಟ ಹೈದರಾಬಾದ್ ಮೂಲದ ಪರ್ವತಾರೋಹಿ ಅರುಣ್ ಕುಮಾರ್ ತಿವಾರಿ ಅವರ ಮೃತದೇಹವನ್ನು ಹಿಮಾಲಯದ ಹಿಮದ ನಡುವೆಯೇ ಬಿಡಲು ಅವರ ಕುಟುಂಬ ಸದಸ್ಯರು ಅತ್ಯಂತ ಕಠಿಣ ನಿರ್ಧಾರ ಕೈಗೊಂಡಿದ್ದಾರೆ.

 

ಸಮುದ್ರ ಮಟ್ಟದಿಂದ 8,848.86 ಮೀಟರ್ ಎತ್ತರದ ಮೌಂಟ್ ಎವರೆಸ್ಟ್ ಶಿಖರ ಏರುವ ಪ್ರಕ್ರಿಯೆಗೆ 50 ರಿಂದ 90 ಲಕ್ಷ ರೂಪಾಯಿ ವೆಚ್ಚವಾಗುತ್ತದೆ. ಆದರೆ, ಅಲ್ಲಿ ಯಾರಾದರೂ ಸಾವನ್ನಪ್ಪಿದರೆ ಅವರ ಶವ ತರುವುದು ಅದಕ್ಕಿಂತಲೂ ದುಬಾರಿಯಾಗಿದೆ.

​ಎವರೆಸ್ಟ್‌ನಲ್ಲಿ ಸಮುದ್ರದ ಮಟ್ಟದಿಂದ 6,400 ಅಡಿ ಎತ್ತರದವರೆಗೆ ಮಾತ್ರ ಹೆಲಿಕಾಪ್ಟರ್‌ಗಳು ಹಾರಾಟ ನಡೆಸಬಲ್ಲವು. ಅಲ್ಲಿಂದ ಕೆಳಗಿದ್ದರೆ ಮಾತ್ರ ಕಾಪ್ಟರ್ ಮೂಲಕ ವಿಮೆ ಹಣದ ನೆರವಿನಿಂದ ಶವ ತರಬಹುದು. ಆದರೆ ಅರುಣ್ ಸಾವನ್ನಪ್ಪಿದ ಪ್ರದೇಶ ಶಿಖರದ ತುದಿಯಿಂದ ಕೇವಲ 60 ಮೀಟರ್ ಕೆಳಗಿದೆ (ಡೆತ್ ಝೋನ್). ಇಲ್ಲಿಗೆ ಹೆಲಿಕಾಪ್ಟರ್ ತೆರಳಲು ಸಾಧ್ಯವೇ ಇಲ್ಲದ ಕಾರಣ, ಶೆರ್ಪಾಗಳೇ (ಸ್ಥಳೀಯ ಮಾರ್ಗದರ್ಶಕರು) ಪ್ರಾಣದ ಹಂಗು ತೊರೆದು ಶವವನ್ನು ಎಳೆದು ತರಬೇಕಾಗುತ್ತದೆ. ಇದಕ್ಕೆ ಕನಿಷ್ಠ 1 ಕೋಟಿ ರೂಪಾಯಿಗೂ ಅಧಿಕ ವೆಚ್ಚ ತಗುಲುತ್ತದೆ.

 

ದುರ್ಗಮ ಮಾರ್ಗದಿಂದ ಶವ ತರಬೇಕಾದರೆ ಕನಿಷ್ಠ 10 ರಿಂದ 12 ನುರಿತ ಶೆರ್ಪಾಗಳು ತೆರಳಬೇಕು. ಅವರು ತಮ್ಮದೇ ಆಕ್ಸಿಜನ್ ಸಿಲಿಂಡರ್ ಹಾಗೂ ಭಾರಿ ತೂಕದ ರಕ್ಷಣಾ ಉಪಕರಣಗಳನ್ನು ಹೊತ್ತು ಸಾಗಬೇಕು. ಸದಾ ನೀರ್ಗಲ್ಲು ಕುಸಿತದ (Avalanche) ಭೀತಿ ಇರುವ ಈ ಅಪಾಯಕಾರಿ ವಲಯದಲ್ಲಿ ಹಿಮದಡಿ ಹೂತುಹೋಗಿರುವ ಶವವನ್ನು ಹುಡುಕಿ, ಹಗ್ಗ ಕಟ್ಟಿ ಕೆಳಗೆ ಇಳಿಸುವುದು ಶೆರ್ಪಾಗಳ ಜೀವಕ್ಕೂ ಅತ್ಯಂತ ಅಪಾಯಕಾರಿಯಾಗಿದೆ. ಅಲ್ಲದೆ ಇದಕ್ಕೆ ವಿಮಾ ಹಣವೂ ಲಭ್ಯವಿರುವುದಿಲ್ಲ.

 

ಒಂದು ವೇಳೆ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ದೇಹವನ್ನು ಕೆಳಗೆ ತರಲು ಮುಂದಾದರೂ, ಅದು ಕರಗಿ ನಮ್ಮನ್ನು ತಲುಪುವಷ್ಟರಲ್ಲಿ ಸಂಪೂರ್ಣ ಹಾನಿಯಾಗಿರುತ್ತದೆ. ಜೊತೆಗೆ, ಒಬ್ಬ ನಿಜವಾದ ಪರ್ವತಾರೋಹಿಯಾಗಿದ್ದ ಅರುಣ್ ಅವರ ಆಸೆಯೂ ಹಿಮಾಲಯದ ಮಡಿಲಲ್ಲೇ ಇರುವುದಾಗಿತ್ತು” ಎಂದು ಕುಟುಂಬಸ್ಥರು ಕಣ್ಣೀರು ಹಾಕುತ್ತಾ ಶವವನ್ನು ಅಲ್ಲೇ ಬಿಡಲು ಸಮ್ಮತಿಸಿದ್ದಾರೆ.

 

ಪರ್ವತಾರೋಹಣದ ವೇಳೆಯೇ ಅರುಣ್ ಅವರ ಆರೋಗ್ಯ ಹದಗೆಟ್ಟಿತ್ತು. ಈ ಹಿನ್ನೆಲೆಯಲ್ಲಿ ಜೊತೆಗಿದ್ದವರು ಅಲ್ಲಿಂದಲೇ ಮರಳುವಂತೆ ಸೂಚಿಸಿದ್ದರು. ಆದರೆ, “ಶಿಖರದ ತುದಿ ಇಷ್ಟು ಹತ್ತಿರ ಸ್ಪಷ್ಟವಾಗಿ ಕಾಣುತ್ತಿರುವಾಗ ನಾನು ಹಿಂದಿರುಗುವ ಮಾತೇ ಇಲ್ಲ” ಎಂದು ಹಠ ಹಿಡಿದು ಅರುಣ್ ತಮ್ಮ ಕನಸಿನ ಎವರೆಸ್ಟ್ ಶಿಖರ ಮುಟ್ಟಿದ್ದರು. ಆದರೆ ವಿಧಿಯ ಆಟ ಬೇರೆಯೇ ಆಗಿತ್ತು. ಶಿಖರದಿಂದ ಕೆಳಗೆ ಇಳಿಯುವಾಗ ಅರುಣ್ ಇದ್ದಕ್ಕಿದ್ದಂತೆ ತೀವ್ರ ರಕ್ತದ ವಾಂತಿ ಮಾಡಿಕೊಳ್ಳಲಾರಂಭಿಸಿದರು. ಶೆರ್ಪಾಗಳು ತಕ್ಷಣ ಆಕ್ಸಿಜನ್ ಮಾಸ್ಕ್ ನೆರವಿನಿಂದ ಅವರನ್ನು ರಕ್ಷಿಸಲು ಯತ್ನಿಸಿದರಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಹಿಮದ ಮಡಿಲಲ್ಲೇ ಕೊನೆಯುಸಿರೆಳೆದಿದ್ದಾರೆ.

 


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin