Police Roundup

ಬೀಮಾತೀರದಲ್ಲಿ ಮತ್ತೆ ರಕ್ತದೋಕುಳಿ! ಒಂದೇ ಕುಟುಂಬದ 6 ಜನರ ಭೀಕರ ನರಮೇಧ; ಹೊಲದ ಬದುವಿನ ಜಗಳಕ್ಕೆ ಮತ್ತೆ ಕೆಂಪಾದ ಭೀಮೆ!

Share News

ದಶಕಗಳ ರಕ್ತಸಿಕ್ತ ಇತಿಹಾಸ, ಗ್ಯಾಂಗ್‌ವಾರ್ ಹಾಗೂ ರಿವೇಂಜ್ ಕಿಲ್ಲಿಂಗ್‌ಗೆ ಹೆಸರಾಗಿದ್ದ ಬೀಮಾತೀರದಲ್ಲಿ ಮತ್ತೆ ನೆತ್ತರಿನ ನದಿಯೇ ಹರಿದಿದೆ. ಇಷ್ಟು ದಿನ ಶಾಂತವಾಗಿದ್ದ ಗಡಿಭಾಗದಲ್ಲಿ ಭೀಕರ ರಕ್ತಪಾತ ಜರುಗಿದ್ದು, ಒಂದೇ ಕುಟುಂಬದ ಆರು ಜನರನ್ನು ಅಟ್ಟಾಡಿಸಿ, ಗುಂಡಿಕ್ಕಿ ಹಾಗೂ ಮಚ್ಚಿನಿಂದ ಭೀಕರವಾಗಿ ಕೊಚ್ಚಿ ಕೊಲೆ ಮಾಡಿರುವ ಅತಿ ಅಮಾನುಷ ಘಟನೆ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಗೋವಿಂದಪುರ ಗ್ರಾಮದ ಹೊಲವೊಂದರಲ್ಲಿ ನಡೆದಿದೆ.

​ರಾಜಿ ಸಂಧಾನದ ನೆಪದಲ್ಲಿ ಬಂದೂಕು, ಮಚ್ಚುಗಳೊಂದಿಗೆ ಬಂದ ಎದುರಾಳಿಗಳು ನಡೆಸಿದ ಈ ರಣ ಭೀಕರ ಹತ್ಯಾಕಾಂಡಕ್ಕೆ ಇಡೀ ಉತ್ತರ ಕರ್ನಾಟಕವೇ ಬೆಚ್ಚಿಬಿದ್ದಿದೆ.

 

ನಿರಾಳೆ ಮತ್ತು ಜೊಳಗಿ/ಗೊಳಗಿ ಕುಟುಂಬಗಳ ಮಧ್ಯೆ ದೀರ್ಘಕಾಲದಿಂದ ನಡೆಯುತ್ತಿದ್ದ 10 ಎಕರೆ ಜಮೀನಿನ ವಾರಸುದಾರಿಕೆ ವಿವಾದವೇ ಈ ನರಮೇಧಕ್ಕೆ ಮೂಲ ಕಾರಣ ಎನ್ನಲಾಗಿದೆ. ಗ್ರಾಮದ ಹಿರಿಯರು ಹಾಗೂ ಪಂಚಾಯತಿ ಮುಖಂಡರ ಸಮ್ಮುಖದಲ್ಲಿ ಹೊಲದ ಬಳಿಯೇ ರಾಜಿ ಸಂಧಾನ ನಡೆಯುತ್ತಿತ್ತು. ಈ ವೇಳೆ ಮಾತಿಗೆ ಮಾತು ಬೆಳೆದು, ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ. ಹಿರಿಯರ ಕಂಟ್ರೋಲ್ ತಪ್ಪುತ್ತಿದ್ದಂತೆ ಎದುರಾಳಿಗಳು ಏಕಾಏಕಿ ಬಂದೂಕುಗಳಿಂದ ಗುಂಡಿನ ದಾಳಿ ನಡೆಸಿದ್ದಾರೆ.

​ಪ್ರಾಣ ಉಳಿಸಿಕೊಳ್ಳಲು ‘ಬೇಡ ಬಿಟ್ಟುಬಿಡಿ’ ಎಂದು ಆರ್ತನಾದ ಮಾಡುತ್ತಾ ಓಡಿದವರನ್ನು ಅಟ್ಟಾಡಿಸಿ, ಮಚ್ಚುಗಳಿಂದ ಕೈ, ಕತ್ತು, ತಲೆ ಕತ್ತರಿಸಿ ನಾಯಿಗಳಂತೆ ಭೀಕರವಾಗಿ ಕೊಂದು ಮುಗಿಸಲಾಗಿದೆ.

 

ಹತ್ಯೆಯಾದ ದುರ್ದೈವಿಗಳು:

​ರೇವಣಸಿದ್ದಪ್ಪ ನಿರಾಳೆ

​ದುಂಡಪ್ಪ ರೇವಣಸಿದ್ದಪ್ಪ ನಿರಾಳೆ

​ಶಿವಪುತ್ರ ರೇವಣಸಿದ್ದಪ್ಪ ನಿರಾಳೆ

​ಚಂದ್ರಶೇಖರ್ ನಿರಾಳೆ

​ಶಬ್ಬಿರ್ ನದಾಫ್

(ಮತ್ತೋರ್ವನ ಗುರುತು ಪತ್ತೆ ಕಾರ್ಯ ನಡೆಯುತ್ತಿದೆ).

​ನಿರಾಳೆ ಕುಟುಂಬದ ಮೇಲೆ ಈ ಮಾರಣಾಂತಿಕ ದಾಳಿ ನಡೆಸಿದವನನ್ನು ಸ್ಥಳೀಯ ಆಸಾಮಿ ಅಪ್ಪುಗೌಡ ಎಂದು ಶಂಕಿಸಲಾಗಿದ್ದು, ಈ ಕೃತ್ಯಕ್ಕೆ ಮುಂಬೈ ಅಥವಾ ಗಡಿಭಾಗದ ಸುಫಾರಿ ಕೊಲೆಗಡುಕರು ಕೈಜೋಡಿಸಿರುವ ಶಂಕೆ ವ್ಯಕ್ತವಾಗಿದೆ.

 

ಈ ಭೀಕರ ಕೊಲೆ ಸರಣಿಯ ಹಿಂದೆ ಕೇವಲ ಜಮೀನು ವಿವಾದ ಮಾತ್ರವಲ್ಲದೆ, ಹಳೇ ಹಗೆತನದ ಅಂತರ್ಜಾತಿ ಪ್ರೇಮ ಪುರಾಣವೂ ಬೆಸೆದುಕೊಂಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಗಾಣಿಗ ಸಮುದಾಯದ ಹುಡುಗಿಯನ್ನು ನಾಯಕ ಸಮುದಾಯದ ಹುಡುಗ ಶಿವಾನಂದ (ಕಲ್ಲನಗೌಡರ ಪುತ್ರ) ಪ್ರೀತಿಸಿ ಮದುವೆಯಾಗಿದ್ದನಂತೆ. ಗ್ರಾಮೀಣ ಭಾಗದ ಜಾತಿ ಬೇಧದ ಹಿನ್ನೆಲೆಯಲ್ಲಿ ಈ ಹಿಂದೆ ಅಪ್ರಾಪ್ತ ಬಾಲಕಿ ಅಪಹರಣ ಕೇಸು ದಾಖಲಾಗಿ, ಶಿವಾನಂದನಿಗೆ ಕೋರ್ಟ್ ಶಿಕ್ಷೆ ಪ್ರಕಟಿಸಿತ್ತು. ಇದರಿಂದ ಇಡೀ ಕುಟುಂಬ ಊರು ತೊರೆದಿತ್ತು. ಇತ್ತೀಚೆಗೆ ಊರಿನಲ್ಲಿದ್ದ ಜಮೀನನ್ನು ಮಾರಾಟ ಮಾಡಲು ಇವರು ಬಂದಾಗ, ಹಳೇ ದ್ವೇಷದ ಕಿಡಿ ಮತ್ತೆ ಹೊತ್ತಿ ಉರಿದು, ಕೊಂಡುಕೊಂಡವರಿಗೂ ಹಾಗೂ ಮಾರಲು ಬಂದವರಿಗೂ ಭೀಕರವಾಗಿ ಕೊಚ್ಚಿ ಹಾಕಲಾಗಿದೆ.

 

ಬೀಮಾತೀರದಲ್ಲಿ ಹಿಂದೆ ನಡೆದ ಚಂದಪ್ಪ ಹರಿಜನ, ಕೇಶಪ್ಪ ತಾವರಖೇಡ, ಶಿವಾಜಿ ಭೋರಗಿ ಗ್ಯಾಂಗ್‌ಗಳ ದಶಕಗಳ ಕಾಲದ ಭೀಕರ ಸಾಮ್ರಾಜ್ಯ ಹಾಗೂ ಇತ್ತೀಚಿನ ಸಾವ್ಕಾರ್-ಚಡಚಣ ಕುಟುಂಬಗಳ ರಕ್ತಚರಿತ್ರೆಯ ಹಳೇ ಅಧ್ಯಾಯವನ್ನೇ ಈ ಘಟನೆ ನೆನಪಿಗೆ ತಂದಿದೆ. ಅಂದು ಕೂಡ ಕೇವಲ ಒಂದು ಹೊಲದ ಬದುವಿನ ಜಗಳವೇ ನೂರಾರು ಜನರ ಹೆಣ ಬೀಳಲು ಕಾರಣವಾಗಿತ್ತು. ಈಗಲೂ ಅದೇ ಮಣ್ಣು, ಹೆಣ್ಣು, ಹೊನ್ನಿನ ಮಾಯೆಗೆ ಆರು ಜೀವಗಳು ಬಲಿಯಾಗಿದ್ದು, ಭೀಮಾತೀರದಲ್ಲಿ ಹೊಸ ಗ್ಯಾಂಗ್ ವಾರ್ ಆರಂಭವಾಯಿತೇ? ಎಂಬ ಆತಂಕ ಸಾರ್ವಜನಿಕರಲ್ಲಿ ಮೂಡಿದೆ.

 

ಇಂತಹ ಗ್ಯಾಂಗ್ ವೈಷಮ್ಯಗಳು ಸಣ್ಣ ಗಡಿ ಜಗಳದಿಂದಲೇ ಆರಂಭವಾಗಿ ತಲೆಮಾರುಗಳ ದ್ವೇಷವಾಗಿ ಬೆಳೆಯುತ್ತವೆ. ಒಂದು ಕೊಲೆಗೆ ಮತ್ತೊಂದು ಬದ್ಲಾ (ಪ್ರತೀಕಾರ) ಎಂಬ ಕರಾಳ ಮನಸ್ಥಿತಿ ಇಲ್ಲಿನ ಯುವಕರನ್ನು ಅಪರಾಧ ಲೋಕಕ್ಕೆ ತಳ್ಳುತ್ತಿದೆ. ಇದರ ಅಂತ್ಯ ಮಾತ್ರ ಮಕ್ಕಳಿಗೆ ಅನಾಥ ಜೀವನ, ಮಹಿಳೆಯರಿಗೆ ಕಣ್ಣೀರು ಹಾಗೂ ಊರಿನಲ್ಲಿ ಶಾಶ್ವತ ಶತ್ರುತ್ವವನ್ನು ಮಾತ್ರ ಉಳಿಸುತ್ತದೆ.

 

ಘಟನೆಯ ಭೀಕರತೆ ತಿಳಿಯುತ್ತಿದ್ದಂತೆಯೇ ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು (SP) ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳ ದಂಡು ಸಶಸ್ತ್ರ ಪಡೆಗಳೊಂದಿಗೆ (KSRP) ಗೋವಿಂದಪುರ ಗ್ರಾಮಕ್ಕೆ ಧಾವಿಸಿದೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

​ಮುಂದೆ ಯಾವುದೇ ರೀತಿಯ ಪ್ರತೀಕಾರದ ಅಹಿತಕರ ಘಟನೆಗಳು ಅಥವಾ ಗಲಭೆಗಳು ನಡೆಯದಂತೆ ತಡೆಯಲು ಇಡೀ ಗೋವಿಂದಪುರ ಗ್ರಾಮವನ್ನು ಪೊಲೀಸ್ ಚಾವಣಿಯನ್ನಾಗಿ ಪರಿವರ್ತಿಸಲಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ತಲೆಮರೆಸಿಕೊಂಡಿರುವ ಮುಖ್ಯ ಆರೋಪಿ ಅಪ್ಪುಗೌಡ ಹಾಗೂ ಸುಫಾರಿ ಗ್ಯಾಂಗ್ ಪತ್ತೆಗಾಗಿ ಪೊಲೀಸರು ಹಗಲು-ರಾತ್ರಿ ಜಾಲ ಬೀಸಿದ್ದಾರೆ.

 

​ಸೂಫಿ-ದಾಸ ಪರಂಪರೆ, ರೈತರ ಸಹಬಾಳ್ವೆಯ ಇತಿಹಾಸವಿರುವ ಈ ಪವಿತ್ರ ಭೂಮಿಯಲ್ಲಿ ಮತ್ತೆ ಕ್ರಿಮಿನಲ್ ಚಟುವಟಿಕೆಗಳು ಮೊಳಕೆಯೊಡೆಯದಂತೆ ಸರ್ಕಾರ ಮತ್ತು ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕಿದೆ.

ವಿಶೇಷ ಕ್ರೈಂ ವರದಿ: ಪರಶಿವ ಧನಗೂರು (ಉದಯ ಟಿವಿ ಶಿವು)

 


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin