Police Roundup

ತಮಿಳುನಾಡು ರಾಜಕೀಯದಲ್ಲಿ ಮಹಾ ಬಿರುಗಾಳಿ: ಬಿಜೆಪಿ ತೊರೆದು ಸ್ವಂತ ಪಕ್ಷ ಕಟ್ಟಲಿದ್ದಾರಾ ‘ಸಿಂಗಂ’ ಅಣ್ಣಾಮಲೈ?

Share News

ಚೆನ್ನೈ: ತಮಿಳುನಾಡು ರಾಜಕೀಯ ರಂಗದಲ್ಲಿ ಸದ್ಯ ಭಾರಿ ಸಂಚಲನವೊಂದು ಸೃಷ್ಟಿಯಾಗಿದ್ದು, ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಅವರು ಕಮಲ ಮುಡಿಯಿಂದ ಹೊರಬಂದು, ಹೊಸ ಪ್ರಾದೇಶಿಕ ಪಕ್ಷವನ್ನು ಸ್ಥಾಪಿಸಲಿದ್ದಾರಾ ಎಂಬ ವದಂತಿಗಳು ದಟ್ಟವಾಗಿವೆ. ಇತ್ತೀಚಿನ ರಾಜಕೀಯ ಬೆಳವಣಿಗೆಗಳು, ಪಕ್ಷದ ಹೈಕಮಾಂಡ್ ನಿರ್ಧಾರಗಳು ಹಾಗೂ ಹಿರಿಯ ನಾಯಕರ ಆಂತರಿಕ ನಡವಳಿಕೆಗಳಿಂದ ಬೇಸತ್ತಿರುವ ಅವರು ಬಿಜೆಪಿಗೆ ಗುಡ್‌ಬೈ ಹೇಳಲು ಸಜ್ಜಾಗಿದ್ದಾರೆ ಎನ್ನಲಾಗುತ್ತಿದ್ದು, ಈ ಕುರಿತು ಜೂನ್ 4 ರಂದು ಮಹತ್ವದ ಘೋಷಣೆ ಹೊರಬೀಳುವ ಸಾಧ್ಯತೆ ಇದೆ.

 

ಇದೇ ಹೊತ್ತಿನಲ್ಲಿ ದಿಢೀರ್ ದೆಹಲಿಗೆ ತೆರಳಿ ವರಿಷ್ಠರನ್ನು ಭೇಟಿಯಾಗಿ ಮರಳಿರುವ ಅಣ್ಣಾಮಲೈ ಅವರ ಒಂದು ಹೇಳಿಕೆ ಇಡೀ ತಮಿಳುನಾಡು ರಾಜಕೀಯದಲ್ಲಿ ತಲ್ಲಣ ಸೃಷ್ಟಿಸಿದೆ. ದೆಹಲಿಯಿಂದ ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅಣ್ಣಾಮಲೈ ಅವರನ್ನು ಮಾಧ್ಯಮ ಪ್ರತಿನಿಧಿಗಳು, “ನೀವು ಬಿಜೆಪಿ ತೊರೆದು ಹೊಸ ಪಕ್ಷ ಆರಂಭಿಸುತ್ತಿದ್ದೀರಾ?” ಎಂದು ನೇರವಾಗಿ ಪ್ರಶ್ನಿಸಿದರು.

 

​ಇದಕ್ಕೆ ಅತ್ಯಂತ ನಿಗೂಢವಾಗಿ ಉತ್ತರಿಸಿದ ಅಣ್ಣಾಮಲೈ, “ಇನ್ನೆರಡು ದಿನ ಕಾಯಬೇಕು. ನಿಮ್ಮೆಲ್ಲಾ ಪ್ರಶ್ನೆಗಳಿಗೂ ಸೂಕ್ತ ಉತ್ತರ ಸಿಗಲಿದೆ” ಎಂದು ಹೇಳುವ ಮೂಲಕ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದ್ದಾರೆ. ಯಾವುದೇ ಪ್ರಶ್ನೆಯನ್ನು ನೇರವಾಗಿ ನಿರಾಕರಿಸದ ಅವರ ಈ ನಡೆ, ಅವರು ಪಕ್ಷ ತೊರೆಯುವುದು ಬಹುತೇಕ ಖಚಿತ ಎಂಬ ಮುನ್ಸೂಚನೆಯನ್ನು ನೀಡಿದೆ.

 

ಕಾಕತಾಳೀಯವೆಂದರೆ ಜೂನ್ 4 ರಂದು ಅಣ್ಣಾಮಲೈ ಅವರು ತಮ್ಮ 42ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ, ಈ ವಿಶೇಷ ದಿನದಂದೇ ಅವರು ತಮ್ಮ ಹೊಸ ಪ್ರಾದೇಶಿಕ ಪಕ್ಷವನ್ನು ಅಧಿಕೃತವಾಗಿ ಘೋಷಿಸುವ ಎಲ್ಲಾ ಸಾಧ್ಯತೆಗಳಿವೆ ಎಂದು ರಾಜಕೀಯ ವಿಶ್ಲೇಷಕರು ಬಲವಾಗಿ ಊಹಿಸುತ್ತಿದ್ದಾರೆ.

 

​ಈಗಾಗಲೇ ಕೊಯಂಬತ್ತೂರಿನ ಹಲವೆಡೆ ಅಣ್ಣಾಮಲೈ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಬೃಹತ್ ಪೋಸ್ಟರ್‌ಗಳು ರಾರಾಜಿಸುತ್ತಿದ್ದು, ಅದರಲ್ಲಿ “ನಮ್ಮ ನಾಯಕ ನಮ್ಮ ಆಡಳಿತ ನಡೆಸುತ್ತಾರೆ” ಮತ್ತು “ದೂರದೃಷ್ಟಿಯುಳ್ಳ ನಾಯಕನಿಗೆ ಮಿತಿಗಳಿಲ್ಲ” ಎಂಬಿತ್ಯಾದಿ ಹೈಪ್ ಕ್ರಿಯೇಟ್ ಮಾಡುವ ಬರಹಗಳನ್ನು ಮುದ್ರಿಸಲಾಗಿದೆ. ಈ ಪೋಸ್ಟರ್‌ಗಳು ಅವರ ಮುಂದಿನ ರಾಜಕೀಯ ಹೆಜ್ಜೆಯ ದಿಕ್ಸೂಚಿಯಂತೆ ಕಾಣುತ್ತಿವೆ.

 

ತಮಿಳುನಾಡು ಜನತೆ ಸದಾ ರಾಷ್ಟ್ರೀಯ ಪಕ್ಷಗಳಿಗಿಂತ ಪ್ರಾದೇಶಿಕ ಪಕ್ಷಗಳಿಗೆ ಹಾಗೂ ಪ್ರಾದೇಶಿಕ ಅಸ್ಮಿತೆಗೆ ಹೆಚ್ಚು ಮನ್ನಣೆ ನೀಡುತ್ತಾರೆ ಎಂಬ ಸತ್ಯವನ್ನು ಅಣ್ಣಾಮಲೈ ಅರಿತುಕೊಂಡಿದ್ದಾರೆ. ಇತ್ತೀಚೆಗಷ್ಟೇ ನಟ ದಳಪತಿ ವಿಜಯ್ ‘ಟಿವಿಕೆ’ (TVK) ಪಕ್ಷವನ್ನು ಕಟ್ಟಿ ತಮಿಳುನಾಡಿನಲ್ಲಿ ಹೊಸ ಸಂಚಲನ ಸೃಷ್ಟಿಸಿ ಯಶಸ್ವಿಯಾದ ಮಾದರಿಯೇ ಈಗ ಅಣ್ಣಾಮಲೈ ಅವರಿಗೂ ಸ್ಫೂರ್ತಿಯಾಗಿದೆ ಎನ್ನಲಾಗುತ್ತಿದೆ. ತಾವೂ ಕೂಡ ಒಂದು ಸ್ವತಂತ್ರ ಪ್ರಾದೇಶಿಕ ಶಕ್ತಿಯಾಗಿ ಮೂಡಿಬರಲು ಮಾಸ್ಟರ್ ಪ್ಲಾನ್ ಮಾಡಿಕೊಂಡಿರುವ ಅಣ್ಣಾಮಲೈ, ಜೂನ್ 4 ರಂದು ತೆಗೆದುಕೊಳ್ಳಲಿರುವ ಆ ಒಂದು ಮಹತ್ವದ ನಿರ್ಧಾರ ಏನು ಎಂಬುದನ್ನು ಇಡೀ ದೇಶವೇ ಅತ್ಯಂತ ಕುತೂಹಲದಿಂದ ಕಾಯುತ್ತಿದೆ.

 


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin