Police Roundup

ಹುಣಸೂರು: 50 ವರ್ಷಗಳಿಂದ ಉಳುಮೆ ಮಾಡುತ್ತಿರುವ ಜಮೀನಿಗೆ ಹಕ್ಕುಪತ್ರ ನೀಡಲು ಆಗ್ರಹ; ಎಸಿಗೆ ಆದಿವಾಸಿಗಳ ಮನವಿ

Share News

ಹುಣಸೂರು: ತಾಲೂಕಿನ ನೆರಳಕುಪ್ಪೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಚ್ಚುವಿನಹಳ್ಳಿ ಕಾಡಂಚಿನ ನೆರಳಕುಪ್ಪೆ ‘ಬಿ’ ಹಾಡಿಯ ಆದಿವಾಸಿ ಕುಟುಂಬಗಳು ತಲೆಮಾರುಗಳಿಂದ ಉಳುಮೆ ಮಾಡುತ್ತಿರುವ ಕಂದಾಯ ಭೂಮಿಗೆ ಹಕ್ಕುಪತ್ರ ನೀಡುವಂತೆ ಆಗ್ರಹಿಸಿ ಉಪವಿಭಾಗಾಧಿಕಾರಿ (AC) ಶ್ರೀಮತಿ ಕಾವ್ಯರಾಣಿ ಅವರಿಗೆ ಬುಧವಾರ (ಜೂನ್ 3) ಮನವಿ ಸಲ್ಲಿಸಿವೆ.

​ಹಾಡಿಯ ಹಿರಿಯರಾದ ಕೆಂಪಮ್ಮ ಮತ್ತು ಸೀತೆ ಅವರ ನೇತೃತ್ವದಲ್ಲಿ ಉಪವಿಭಾಗಾಧಿಕಾರಿಗಳನ್ನು ಭೇಟಿ ಮಾಡಿದ ನಿಯೋಗವು, ತಮಗೆ ಆಗುತ್ತಿರುವ ಅನ್ಯಾಯವನ್ನು ಮನವರಿಕೆ ಮಾಡಿಕೊಟ್ಟಿತು.

 

ಕಾಡಿನಿಂದ ಹೊರಬಂದಾಗಿನಿಂದಲೂ ಸುಮಾರು 50 ವರ್ಷಗಳಿಂದ ನೆರಳಕುಪ್ಪೆ ಸರ್ವೇ ನಂಬರ್ 24 ಮತ್ತು 25 ರಲ್ಲಿನ 11 ಎಕರೆ 05 ಗುಂಟೆ ಕಂದಾಯ ಭೂಮಿಯಲ್ಲಿ ತಾವು ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿದ್ದೇವೆ ಎಂದು ಆದಿವಾಸಿ ಮಹಿಳೆಯರು ತಿಳಿಸಿದರು. 1987 ರಲ್ಲಿ ಚೆನ್ನೇಗೌಡರ ಮಗ ಸಂಜೀವ ಎಂಬುವವರು ಈ ಭೂಮಿ ತನ್ನದೆಂದು ತಕರಾರು ತೆಗೆದಾಗ, ‘ಡೀಡ್’ ಸಂಸ್ಥೆಯ ನೆರಡನೊಂದಿಗೆ ಅಂದಿನ ಜಿಲ್ಲಾಧಿಕಾರಿ ವಿ.ಪಿ. ಬಳಿಗಾರ್ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಅಂದು ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿಗಳು, ಆರು ಆದಿವಾಸಿ ಕುಟುಂಬಗಳ ಹೆಸರಿಗೆ ಕೈಬರಹದ ಫಸಲು ಪಹಣಿ ಬರೆಯಲು ಆದೇಶಿಸಿದ್ದರು. ಅದರಂತೆ ಪಹಣಿಯಲ್ಲಿ ಹೆಸರು ದಾಖಲಾಗಿ, ತಹಶೀಲ್ದಾರ್ ಅವರು ಕಂದಾಯ ಮಹಜರ್ ನಡೆಸಿ ಆದಿವಾಸಿಗಳ ಸ್ವಾಧೀನವನ್ನು ದೃಢೀಕರಿಸಿ ಮಹಜರ್ ಪ್ರತಿ ನೀಡಿದ್ದರು.

 

ಮೊದಲು ಮಲ್ಲೇಗೌಡ ಮತ್ತು ಬೀರೇಗೌಡ ಎಂಬುವವರು ಸಾಗುವಳಿ ಮಾಡಿಸಿಕೊಂಡು, ನಂತರ ಕೊಡಗಿನ ಚೆನ್ನೇಗೌಡರಿಗೆ ಮಾರಾಟ ಮಾಡಿದ್ದರು. ಅವರ ಮರಣಾನಂತರ ಪತ್ನಿ ನೀಲಮ್ಮನಿಗೆ ಖಾತೆ ವರ್ಗಾವಣೆಯಾಗಿತ್ತು. ಈಗ ನೀಲಮ್ಮ ಮೃತಪಟ್ಟ ನಂತರ ಮಗ ಸಂಜೀವ ತನ್ನ ಹೆಸರಿಗೆ ಖಾತೆ ಮಾಡಿಸಿಕೊಳ್ಳಲು ಅರ್ಜಿ ಸಲ್ಲಿಸಿದ್ದಾಗ ಆದಿವಾಸಿ ಕುಟುಂಬಗಳು ತಕರಾರು ಅರ್ಜಿ ಸಲ್ಲಿಸಿದ್ದವು. ಆದಾಗ್ಯೂ, ತಕರಾರನ್ನು ಪರಿಗಣಿಸದೆ ಅಧಿಕಾರಿಗಳು ಸಂಜೀವನ ಹೆಸರಿಗೆ ಖಾತೆ ಮಾಡಿಕೊಟ್ಟಿರುವುದು ದಾಖಲೆಗಳಿಂದ ತಿಳಿದುಬಂದಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.

 

ಈ ಹಿಂದೆಯೂ ಹಲವು ಬಾರಿ ಜಿಲ್ಲಾಧಿಕಾರಿ ಹಾಗೂ ಉಪವಿಭಾಗಾಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಈಗಲಾದರೂ ನೈಸರ್ಗಿಕ ನ್ಯಾಯದ ಮಾನದಂಡ ಬಳಸಿ, ಸಂಜೀವನ ಹೆಸರಿಗಿರುವ ಕಂದಾಯ ದಾಖಲೆಗಳು ಹಾಗೂ ಹಳೆಯ ಸಾಗುವಳಿ ಪತ್ರವನ್ನು ರದ್ದುಗೊಳಿಸಬೇಕು. ಕೈಬರಹದ ಆರ್‌ಟಿಸಿ ಮತ್ತು ಕಂದಾಯ ಮಹಜರ್ ಆಧಾರದ ಮೇಲೆ ತಲೆಮಾರುಗಳಿಂದ ಭೂಮಿ ಅನುಭವಿಸುತ್ತಿರುವ ತಮಗೆ ಹಕ್ಕುಪತ್ರ ನೀಡಬೇಕು ಎಂದು ಕೆಂಪಮ್ಮ ಮತ್ತು ಸೀತೆ ಒತ್ತಾಯಿಸಿದ್ದಾರೆ.

 

ಆದಿವಾಸಿಗಳ ಅಹವಾಲು ಆಲಿಸಿದ ಉಪವಿಭಾಗಾಧಿಕಾರಿ ಶ್ರೀಮತಿ ಕಾವ್ಯರಾಣಿ ಅವರು, ತಹಶೀಲ್ದಾರ್ ಅವರಿಂದ ತಕ್ಷಣವೇ ವರದಿ ತರಿಸಿ ಸೂಕ್ತ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದರು. ಇದೇ ವೇಳೆ ತಾಲೂಕು ತಹಶೀಲ್ದಾರ್ ಮಂಜುನಾಥ್ ಅವರು ಶೀಘ್ರದಲ್ಲೇ ಸ್ಥಳಕ್ಕೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸುವುದಾಗಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

​ಈ ಸಂದರ್ಭದಲ್ಲಿ ತಾಲೂಕು ಪರಿಶಿಷ್ಟ ಪಂಗಡಗಳ ಕಲ್ಯಾಣಾಧಿಕಾರಿಗಳಿಗೂ ಮನವಿ ಸಲ್ಲಿಸಲಾಗಿದ್ದು, ‘ಡೀಡ್’ ಸಂಸ್ಥೆಯ ನಿರ್ದೇಶಕರಾದ ಡಾ. ಶ್ರೀಕಾಂತ್ ಅವರು ಆದಿವಾಸಿ ನಿಯೋಗದ ಜೊತೆಯಲ್ಲಿದ್ದರು.

 


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin