ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿದ ದಿನ ಕಾರಿನಲ್ಲಿ ಮೌನವಾಗಿ ಕುಳಿತಿದ್ದ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಟ್ರೋಲ್ ಆಗುತ್ತಿರುವ ಬೆನ್ನಲ್ಲೇ, ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ತಮ್ಮದೇ ಶೈಲಿಯಲ್ಲಿ ತಿರುಗೇಟು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯ ವಿದ್ಯಮಾನಗಳು, ಟ್ರೋಲ್‌ಗಳು ಹಾಗೂ ಸಚಿವ ಸ್ಥಾನದ ಆಕಾಂಕ್ಷೆಯ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ.
ಸಿದ್ದರಾಮಯ್ಯ ಅವರ ರಾಜೀನಾಮೆ ಸಂದರ್ಭದಲ್ಲಿ ಕಾರಿನಲ್ಲಿ ಗಂಭೀರವಾಗಿ ಕುಳಿತಿದ್ದ ದೃಶ್ಯ ವೈರಲ್ ಆಗಿದ್ದಕ್ಕೆ ಪ್ರತಿಕ್ರಿಯಿಸಿದ ಪ್ರದೀಪ್ ಈಶ್ವರ್, “ಅದು ಅತ್ಯಂತ ಭಾವನಾತ್ಮಕ ಸಂದರ್ಭವಾಗಿತ್ತು. ಹಿರಿಯ ನಾಯಕರೊಬ್ಬರು ಅಧಿಕಾರದಿಂದ ಕೆಳಗಿಳಿಯುತ್ತಿದ್ದರೆ, ಹೊಸ ನಾಯಕರು ಜವಾಬ್ದಾರಿ ವಹಿಸಿಕೊಳ್ಳುತ್ತಿದ್ದರು. ಆ ಸಮಯದಲ್ಲಿ ಏನು ಮಾತನಾಡಬೇಕೆಂದು ನನಗೆ ತಿಳಿದಿರಲಿಲ್ಲ. ಅಂತಹ ಸೂಕ್ಷ್ಮ ಕ್ಷಣಗಳಲ್ಲಿ ಯಾವುದೇ ಹೇಳಿಕೆ ನೀಡಿದರೂ ಅದನ್ನು ತಪ್ಪಾಗಿ ಅರ್ಥೈಸಿಕೊಳ್ಳುವ ಸಾಧ್ಯತೆ ಇರುತ್ತದೆ. ಹೀಗಾಗಿಯೇ ನಾನು ಮೌನಕ್ಕೆ ಶರಣಾಗಿದ್ದೆ,” ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ ಸಾಮಾಜಿಕ ಜಾಲತಾಣಗಳ ಟ್ರೋಲ್‌ಗಳ ಬಗ್ಗೆ ಲೇವಡಿ ಮಾಡಿದ ಅವರು, “ಟ್ರೋಲ್‌ಗಳು ನನಗೆ ಹೊಸದೇನಲ್ಲ. ನಾನು ಕರ್ನಾಟಕದ ಟ್ರೋಲ್ ಪೇಜ್‌ಗಳ ‘ಕ್ರಶ್’ ಆಗಿದ್ದೇನೆ,” ಎಂದು ಹಾಸ್ಯ ಚಟಾಕಿ ಹಾರಿಸಿದರು.
ರಾಜ್ಯ ರಾಜಕಾರಣದ ಮುಂದಿನ ಬೆಳವಣಿಗೆಯಲ್ಲಿ ಸಚಿವ ಸ್ಥಾನ ಸಿಗುವ ಸಾಧ್ಯತೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಾಸಕರು, “ನನಗೆ ಸಚಿವ ಸ್ಥಾನ ಪಡೆಯುವ ಆಸೆ ಇರುವುದು ನಿಜ. ಆದರೆ ಹೈಕಮಾಂಡ್ ಸ್ಥಾನ ಕೊಟ್ಟರೂ, ಕೊಡದಿದ್ದರೂ ನನಗೆ ಪರವಾಗಿಲ್ಲ. ನಾವು ಕೇವಲ ಅಧಿಕಾರಕ್ಕಾಗಿ ರಾಜಕೀಯಕ್ಕೆ ಬಂದಿಲ್ಲ. ಪಕ್ಷದ ಸಿದ್ಧಾಂತ ಮತ್ತು ಜನಸೇವೆ ಮಾಡುವ ಉದ್ದೇಶದಿಂದ ಬಂದಿದ್ದೇವೆ,” ಎಂದರು.
ಒಬಿಸಿ ಚಳವಳಿಯ ಬಲವರ್ಧನೆ: “ನಾನು ಒಬಿಸಿ ಸಮುದಾಯದ ಯುವ ನಾಯಕ. ರಾಜ್ಯದಲ್ಲಿ ಒಬಿಸಿ ಚಳವಳಿಯನ್ನು ಮತ್ತಷ್ಟು ಬಲಪಡಿಸುವುದು ನನ್ನ ಮುಖ್ಯ ಉದ್ದೇಶವಾಗಿದೆ. ಒಂದು ವೇಳೆ ಅಧಿಕಾರ ಹಿಡಿಯುವುದೇ ನನ್ನ ಏಕೈಕ ಗುರಿಯಾಗಿದ್ದರೆ, ನಾನು ಇಷ್ಟೊಂದು ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುವ ಕೆಲಸ ಮಾಡುತ್ತಿರಲಿಲ್ಲ,” ಎಂದು ಪ್ರದೀಪ್ ಈಶ್ವರ್ ಮಾರ್ಮಿಕವಾಗಿ ನುಡಿದರು.
ಸಿದ್ದರಾಮಯ್ಯ ಅವರ ರಾಜೀನಾಮೆ ಬಳಿಕ ರಾಜ್ಯ ಕಾಂಗ್ರೆಸ್‌ನಲ್ಲಿ ಹೊಸ ನಾಯಕತ್ವದ ಪರ್ವ ಆರಂಭವಾಗುತ್ತಿದ್ದು, ಒಬಿಸಿ ಯುವ ಕೋಟಾದಡಿ ಪ್ರದೀಪ್ ಈಶ್ವರ್ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಸಿಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.