Police Roundup

ಬೇಟೆಯಾಡಿ ಅರಣ್ಯಾಧಿಕಾರಿಗಳನ್ನು ಮರಕ್ಕೆ ಕಟ್ಟಿ ವಿಕೃತಿ ಮೆರೆದ ನಾಲ್ವರು ಆರೋಪಿಗಳ ಬಂಧನ: ಏಳು ಜನರಿಗಾಗಿ ತೀವ್ರ ಶೋಧ

Share News

ಸುರಪುರ: ವನ್ಯಜೀವಿಗಳನ್ನು ಬೇಟೆಯಾಡಿ, ಅದನ್ನು ಪ್ರಶ್ನಿಸಲು ಹೋದ ಅರಣ್ಯಾಧಿಕಾರಿಗಳ ಮೇಲೆಯೇ ಭೀಕರ ಹಲ್ಲೆ ನಡೆಸಿ, ಜಾಲಿ ಗಿಡಕ್ಕೆ ಕಟ್ಟಿಹಾಕಿ ವಿಕೃತಿ ಮೆರೆದಿದ್ದ ಬೇಟೆಗಾರರ ಜಾಲದ ನಾಲ್ವರು ಪ್ರಮುಖ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕಕ್ಕೇರ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಮೂರು ದಿನಗಳ ಹಿಂದೆ ಈ ಅಮಾನವೀಯ ಘಟನೆ ನಡೆದಿದೆ.

 

​ಕೆಲವು ದಿನಗಳ ಹಿಂದೆ ಕಿಡಿಗೇಡಿಗಳ ತಂಡವೊಂದು ಕಾಡುಹಂದಿಯೊಂದನ್ನು ಕ್ರೂರವಾಗಿ ಬೇಟೆಯಾಡಿ, ಆ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿತ್ತು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ವಲಯ ಅರಣ್ಯಾಧಿಕಾರಿ (RFO) ಭಾಗಪ್ಪಗೌಡ ಅವರು ಗಸ್ತು ಸಿಬ್ಬಂದಿಗಳಾದ ಲಾಲ್ ಅಹ್ಮದ್ ಹಾಗೂ ಕಾಶಿನಾಥ್ ರಾಠೋಡ್ ಅವರೊಂದಿಗೆ ಆರೋಪಿಗಳ ಪತ್ತೆಗಾಗಿ ಕಾಡಿನಲ್ಲಿ ದಾಳಿ ನಡೆಸಿದ್ದಾರೆ.

 

ದಾಳಿಯ ವೇಳೆ ಅರಣ್ಯ ಸಿಬ್ಬಂದಿಯನ್ನು ಕಂಡು ಹೆದರುವ ಬದಲಿಗೆ ತಿರುಗಿಬಿದ್ದ ಬೇಟೆಗಾರರ ಜಾಲ, ಅಧಿಕಾರಿಗಳನ್ನು ಸುತ್ತುವರಿದು ಒತ್ತೆಯಾಳಾಗಿ ಇಟ್ಟುಕೊಂಡಿದೆ. ಅಷ್ಟಕ್ಕೇ ನಿಲ್ಲದ ಖದೀಮರು, ಅರಣ್ಯ ರಕ್ಷಕರನ್ನು ಕ್ರೂರವಾಗಿ ಜಾಲಿ ಗಿಡಕ್ಕೆ ಕಟ್ಟಿಹಾಕಿ ದೊಣ್ಣೆಗಳಿಂದ ಮನಬಂದಂತೆ ಥಳಿಸಿದ್ದಾರೆ. ಬೇಟೆಗಾರರ ಈ ಭೀಕರ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿರುವ ಆರ್‌ಎಫ್‌ಒ ಭಾಗಪ್ಪಗೌಡ ಅವರನ್ನು ಸದ್ಯ ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ಕೊಡಿಸಲಾಗುತ್ತಿದೆ.

 

ಅರಣ್ಯ ರಕ್ಷಕರ ಮೇಲೆಯೇ ನಡೆದಿರುವ ಈ ಅಮಾನವೀಯ ದೌರ್ಜನ್ಯವನ್ನು ಗಂಭೀರವಾಗಿ ಪರಿಗಣಿಸಿರುವ ಕೊಡೇಕಲ್ ಪೊಲೀಸ್ ಠಾಣೆಯಲ್ಲಿ ಒಟ್ಟು 11 ಮಂದಿ ಆರೋಪಿಗಳ ವಿರುದ್ಧ ವಿವಿಧ ಗಂಭೀರ ಕಾಯ್ದೆಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

​ಪೊಲೀಸ್ ಕಾರ್ಯಾಚರಣೆ:

ಪ್ರಕರಣ ದಾಖಲಾಗುತ್ತಿದ್ದಂತೆಯೇ ಕಾರ್ಯಪ್ರವೃತ್ತರಾದ ಪೊಲೀಸರು ತಕ್ಷಣವೇ ಜಂಟಿ ಕಾರ್ಯಾಚರಣೆ ನಡೆಸಿ, ಸದ್ಯ ನಾಲ್ಕು ಜನ ಪ್ರಮುಖ ಆರೋಪಿಗಳನ್ನು ಬಂಧಿಸಿ ಕಂಬಿ ಎಣಿಸುವಂತೆ ಮಾಡಿದ್ದಾರೆ. ದಾಳಿ ನಡೆಸಿ ಸದ್ಯ ತಲೆಮರೆಸಿಕೊಂಡಿರುವ ಇನ್ನುಳಿದ ಏಳು ಜನ ಖದೀಮರ ಪತ್ತೆಗಾಗಿ ಪೊಲೀಸರು ತೀವ್ರ ಶೋಧ ಕಾರ್ಯ ಮುಂದುವರಿಸಿದ್ದು, ತನಿಖೆ ಚುರುಕುಗೊಂಡಿದೆ.

 


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin