Police Roundup

ಸಕಾರಾತ್ಮಕ ಶಕ್ತಿ ತುಂಬುವ ಧಾರ್ಮಿಕ ಶ್ರದ್ಧಾ ಕೇಂದ್ರ: ಕೇರಳದ ಕೊಟ್ಟಿಯೂರು ವೈಶಾಖ ಮಹೋತ್ಸವಕ್ಕೆ ಹರಿದುಬಂದ ಭಕ್ತಸಾಗರ!

Share News

ಕಣ್ಣೂರು: ಕೇರಳದ ಶಬರಿಮಲೆ, ಗುರುವಾಯೂರು, ತಳಿಪರಂಬ್‌ನ ರಾಜ ರಾಜೇಶ್ವರಿ ಹಾಗೂ ಪರಶಿನಿಕಡವು ಮುಂತಾದ ಪುಣ್ಯಕ್ಷೇತ್ರಗಳ ಸಾಲಿಗೆ ಇದೀಗ ಕೇರಳದ ಮತ್ತೊಂದು ಪವಿತ್ರ ಕ್ಷೇತ್ರ ‘ಕೊಟ್ಟಿಯೂರು’ ಸೇರ್ಪಡೆಯಾಗಿದೆ. ದೇವರ ಸ್ವಂತ ನಾಡಿನ ಪ್ರಕೃತಿಯ ಮಡಿಲಲ್ಲಿರುವ ಕಣ್ಣೂರು ಜಿಲ್ಲೆಯ ಕೊಟ್ಟಿಯೂರು ಶಿವ ಕ್ಷೇತ್ರದಲ್ಲಿ ವರ್ಷಕ್ಕೊಮ್ಮೆ ನಡೆಯುವ ೨೭ ದಿನಗಳ ವೈಶಾಖ ಮಹೋತ್ಸವವು ಕೊಡಗು ಸೇರಿದಂತೆ ಇಡೀ ಕರ್ನಾಟಕದಾದ್ಯಂತ ಭಾರಿ ಸಂಚಲನ ಮೂಡಿಸಿದ್ದು, ಗಡಿ ದಾಟಿ ಭಕ್ತರ ದಂಡೇ ಹರಿದು ಬರುತ್ತಿದೆ.

 

​ಕೇರಳ ರಾಜ್ಯದ ಎರಡನೇ ಅತೀ ಶ್ರೀಮಂತ ದೇಗುಲ ಎಂದು ಹೆಸರುವಾಸಿಯಾಗಿರುವ ಈ ಕೊಟ್ಟಿಯೂರು ಕ್ಷೇತ್ರವು ಸುಮಾರು ೩೦,೦೦೦ ಎಕರೆ ವ್ಯಾಪ್ತಿಯ ದಟ್ಟ ಅಭಯಾರಣ್ಯದ ಮಧ್ಯೆ, ವಾವಲಿ ನದಿಯ ತಟದಲ್ಲಿದೆ. ಮೇ ೨೩ ರಂದು ಆರಂಭವಾಗಿರುವ ಈ ವೈಶಾಖ ಮಹೋತ್ಸವವು ಜೂನ್ ೨೪ ರವರೆಗೆ ನಡೆಯಲಿದ್ದು, ಪ್ರಸ್ತುತ ಸೋಷಿಯಲ್ ಮೀಡಿಯಾಗಳಲ್ಲಿಯೂ (ಡಿಜಿಟಲ್ ಮಾಧ್ಯಮ) ಕೊಟ್ಟಿಯೂರಿನ ವೈಭವದ ವಿಡಿಯೋಗಳು ಸಖತ್ ವೈರಲ್ ಆಗುತ್ತಿವೆ.

 

ದಕ್ಷಯಾಗ ನಡೆದ ಸ್ಥಳ: ಪ್ರಜಾಪತಿ ದಕ್ಷ ಮಹಾರಾಜ ಯಾಗ ಮಾಡಿದ ಜಾಗವಿದು ಎಂಬುದು ಐತಿಹ್ಯ. ಇದೇ ಸ್ಥಳದಲ್ಲಿ ಸತೀದೇವಿ ತನ್ನನ್ನು ತಾನು ಯಜ್ಞಕುಂಡಕ್ಕೆ ಅರ್ಪಣೆ ಮಾಡಿಕೊಂಡಿದ್ದಳು. ಈ ಘಟನೆಯ ಬಳಿಕ ದಾಂಪತ್ಯದಲ್ಲಿ ಕಷ್ಟ ಅನುಭವಿಸುವವರು ಇಲ್ಲಿಗೆ ಬಂದು ಪ್ರಾರ್ಥಿಸಿದರೆ ಕಷ್ಟ ನೀಗಿಸುವುದಾಗಿ ಪರಮೇಶ್ವರನು ಆಶೀರ್ವದಿಸಿದ್ದನೆಂಬ ಪ್ರತೀತಿ ಇದೆ.

​ತಾತ್ಕಾಲಿಕ ಚಪ್ಪರ ಮಂದಿರ: ಪ್ರಕೃತಿ ರಮಣೀಯ ತಾಣವಾದ ಅಕ್ಕರೆ ಕೊಟ್ಟಿಯೂರು ಸನ್ನಿಧಿಯಲ್ಲಿ ಯಾವುದೇ ಸ್ಥಾವರ ರೂಪದ ಶಾಶ್ವತ ದೇವಸ್ಥಾನಗಳಿಲ್ಲ. ವೈಶಾಖ ಮಹೋತ್ಸವಕ್ಕಾಗಿ ಪ್ರಕೃತಿದತ್ತವಾದ ತಾತ್ಕಾಲಿಕ ಚಪ್ಪರ ಮಂದಿರ (ತೆಂಗಿನ ಗರಿಗಳ ಜೋಪಡಿ) ನಿರ್ಮಿಸಿ, ಪರಮೇಶ್ವರನ ಉದ್ಭವ ಲಿಂಗಕ್ಕೆ ಪೂಜೆ ಸಲ್ಲಿಸಲಾಗುತ್ತದೆ.

ದಿನಕ್ಕೆರಡು ಶೀವೇಲಿ ಆಚರಣೆ: ಇಲ್ಲಿ ಪ್ರತಿನಿತ್ಯ ಎರಡು ಆನೆಗಳ ಮೇಲೆ ಶಿವ ಮತ್ತು ಪಾರ್ವತಿಯ ಸ್ವರೂಪದ ಮೂರ್ತಿಯನ್ನು ಇಟ್ಟು ಕ್ಷೇತ್ರದ ಸುತ್ತಲೂ ಪ್ರದಕ್ಷಿಣೆ ಮಾಡಿಸುವ ‘ಶೀವೇಲಿ’ ಉತ್ಸವ ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ.

​ಗಂಧ ಸೂಸುವ ಕಲ್ಲುಗಳು: ವಾವಲಿ ನದಿಯಲ್ಲಿ ಸಿಗುವ ವಿಶಿಷ್ಟ ಕಲ್ಲುಗಳನ್ನು ಒಂದಕ್ಕೊಂದು ತಿಕ್ಕಿದರೆ ಪವಿತ್ರ ಶ್ರೀಗಂಧದ ಪರಿಮಳ ಸಿಗುತ್ತದೆ. ಭಕ್ತರು ಈ ಕಲ್ಲುಗಳನ್ನೂ ದೇವತಾರೂಪದಲ್ಲಿ ಪೂಜಿಸುತ್ತಾರೆ. ಬಿದಿರಿನ ದಂಟನ್ನು ಸೀಳಿ ಸೃಷ್ಟಿಸುವ ‘ಓಡಾ ಪೂ’ ಇಲ್ಲಿನ ವಿಶೇಷ ಆಕರ್ಷಣೆಯಾಗಿದೆ.

​ಮಹಿಳೆಯರಿಗೆ ಪ್ರವೇಶ ನಿಷೇಧ: ೨೭ ದಿನಗಳ ಮಹೋತ್ಸವದ ಮೊದಲ ಎರಡು ದಿನ ಮತ್ತು ಕೊನೆಯ ನಾಲ್ಕು ದಿನಗಳ ಕಾಲ ಇಲ್ಲಿ ಮಹಿಳೆಯರಿಗೆ ಪ್ರವೇಶವಿರುವುದಿಲ್ಲ.

 

ವಾವಲಿ ನದಿಯ ಎಡದಂಡೆಯಲ್ಲಿ ‘ಇಕ್ಕರೆ ಕೊಟ್ಟಿಯೂರು’ (ವಡಕೇಶ್ವರ) ಶಾಶ್ವತ ದೇವಾಲಯವಿದ್ದು, ಇಲ್ಲಿ ವರ್ಷದ ೩೩೮ ದಿನಗಳು ಭಕ್ತರಿಗೆ ದರ್ಶನಕ್ಕೆ ಅವಕಾಶವಿರುತ್ತದೆ. ಆದರೆ, ಬಲದಂಡೆಯಲ್ಲಿರುವ ‘ಅಕ್ಕರೆ ಕೊಟ್ಟಿಯೂರು’ (ಕೇಳಕೇಶ್ವರ) ಉದ್ಭವ ಲಿಂಗ ಕ್ಷೇತ್ರವು ವರ್ಷದಲ್ಲಿ ಕೇವಲ ಈ ೨೭ ದಿನಗಳು ಮಾತ್ರ ತೆರೆದಿರುತ್ತದೆ. ಮಹೋತ್ಸವ ಮುಗಿದ ಬಳಿಕ ಈ ದಟ್ಟ ಅರಣ್ಯದೊಳಗೆ ಜನರ ಸಂಚಾರವನ್ನು ಸಂಪೂರ್ಣ ನಿಷೇಧಿಸಲಾಗುತ್ತದೆ.

 

ಕಳೆದ ವರ್ಷ ಕರ್ನಾಟಕದ ಕೆಲವು ಭಕ್ತರು ಕ್ಷೇತ್ರದ ಆವರಣದಲ್ಲಿ ಎಲ್ಲೆಂದರಲ್ಲಿ ಬಟ್ಟೆ, ಚಪ್ಪಲಿ ಹಾಗೂ ಕಸ ಎಸೆದು ಕ್ಷೇತ್ರದ ಪಾವಿತ್ರ‍್ಯತೆಗೆ ಧಕ್ಕೆ ತಂದಿದ್ದಕ್ಕೆ ಕೇರಳಿಗರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಈ ಬಾರಿ ಕಣ್ಣೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು (ಎಸ್ಪಿ) ಕರ್ನಾಟಕದ ಭಕ್ತರಲ್ಲಿ ಸಾರ್ವಜನಿಕವಾಗಿ ಶುಚಿತ್ವ ಕಾಪಾಡುವಂತೆ ವಿಶೇಷ ಮನವಿ ಮಾಡಿದ್ದಾರೆ. ಗಡಿ ಭಾಗದ ಭಕ್ತರಿಗಾಗಿ ಕನ್ನಡದಲ್ಲೂ ವಿಶೇಷ ಸೂಚನಾ ಫಲಕಗಳನ್ನು ಅಳವಡಿಸಲಾಗಿದ್ದು, ಸೂಕ್ತ ವಾಹನ ನಿಲುಗಡೆ ಹಾಗೂ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.

 

ರೋಮಾಂಚನ ನೀಡುವ ಕ್ಷೇತ್ರ: “ಆಡಂಬರದ ದೇಗುಲಗಳ ಮಧ್ಯೆ ಕೊಟ್ಟಿಯೂರು ಪ್ರಕೃತಿಯ ಮಡಿಲಿನ ಅಪ್ಪಟ ಕ್ಷೇತ್ರವಾಗಿ ಮನಸ್ಸಿಗೆ ನಾಟುತ್ತದೆ. ೪೨ ವರ್ಷಗಳಿಂದ ಶಬರಿಮಲೆಗೆ ಹೋದ ಹಾಗೆ, ಪ್ರತಿವರ್ಷ ಇಲ್ಲಿಗೂ ಬಂದು ಪೂಜೆ ಸಲ್ಲಿಸುತ್ತೇನೆ.”

– ಸುರೇಶ್, ಕೊಡಗು

​ವ್ಯಾಪಕ ಪ್ರಚಾರ – ಭಕ್ತರ ದಂಡು: “ಕೊಡಗಿನಿಂದ ನಿತ್ಯ ಸಾವಿರಾರು ಭಕ್ತರು ಕೊಟ್ಟಿಯೂರಿಗೆ ಭೇಟಿ ನೀಡುತ್ತಿದ್ದಾರೆ. ಈಗಿನ ಕಾಲದಲ್ಲಿ ಇಂಥದೊಂದು ಪ್ರಾಕೃತಿಕ ಕ್ಷೇತ್ರ ಇದೆ ಎಂಬುದನ್ನು ನಂಬುವುದಕ್ಕೇ ಆಗುವುದಿಲ್ಲ. ಈ ವರ್ಷ ಡಿಜಿಟಲ್ ಮಾಧ್ಯಮಗಳ ಪ್ರಚಾರದಿಂದಾಗಿ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ.”

 

 


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin