ಬೆಂಗಳೂರು: ರಾಜ್ಯದ ಆಡಳಿತ ಸುಧಾರಣೆಗೆ ಮುಂದಾಗಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸರ್ಕಾರಿ ವ್ಯವಸ್ಥೆಗೆ ಭರ್ಜರಿ ಚುರುಕು ಮುಟ್ಟಿಸಿದ್ದಾರೆ. ಮಹತ್ವದ ಸಭೆ ನಡೆಸಿ, ಭ್ರಷ್ಟಾಚಾರರಹಿತ ಹಾಗೂ ಪಾರದರ್ಶಕ ಆಡಳಿತಕ್ಕೆ ಖಡಕ್ ಸೂಚನೆ ನೀಡಿದ್ದ ಸಿಎಂ, ಇದರ ಬೆನ್ನಲ್ಲೇ ಇದೀಗ ರಾಜ್ಯ ಸರ್ಕಾರಿ ನೌಕರರ ಹಾಜರಾತಿಗೆ ಸಂಬಂಧಿಸಿದಂತೆ ಅತ್ಯಂತ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ. ಇನ್ಮುಂದೆ ರಾಜ್ಯ ಸರ್ಕಾರದ ಪ್ರತಿಯೊಬ್ಬ ಅಧಿಕಾರಿ ಮತ್ತು ಸಿಬ್ಬಂದಿ ಪ್ರತಿದಿನ ಬೆಳಿಗ್ಗೆ 10 ಗಂಟೆಯೊಳಗೆ ಕಡ್ಡಾಯವಾಗಿ ಕಚೇರಿಗೆ ಹಾಜರಾಗಬೇಕಿದೆ.
ಮುಖ್ಯಮಂತ್ರಿಗಳ ಕಟ್ಟುನಿಟ್ಟಿನ ನಿರ್ದೇಶನದ ಬೆನ್ನಲ್ಲೇ ಕಾರ್ಯಪ್ರವೃತ್ತರಾಗಿರುವ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಜೂನ್ 5 ರಂದು ಅಧಿಕೃತ ಆದೇಶ ಹೊರಡಿಸಿದ್ದಾರೆ. ರಾಜ್ಯ ಸರ್ಕಾರಿ ನೌಕರರು ಇನ್ಮುಂದೆ ತಮ್ಮ ದೈನಂದಿನ ಹಾಜರಾತಿಗಾಗಿ ಜಿಪಿಎಸ್ ಆಧಾರಿತ ‘ಕರ್ತವ್ಯ ಆ್ಯಪ್’ (Kartavya App) ಅನ್ನು ಕಡ್ಡಾಯವಾಗಿ ಬಳಸಬೇಕಾಗಿದ್ದು, ಈ ಕೆಳಗಿನ ನಿಯಮಗಳನ್ನು ಪಾಲಿಸುವಂತೆ ಸೂಚಿಸಲಾಗಿದೆ:
ಚೆಕ್ ಇನ್ ಮತ್ತು ಚೆಕ್ ಔಟ್: ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ ಪ್ರತಿದಿನ ಬೆಳಿಗ್ಗೆ 10 ಗಂಟೆಯೊಳಗೆ ಕಚೇರಿಗೆ ತಲುಪಿ ಆ್ಯಪ್ನಲ್ಲಿ ‘Check In’ ಮಾಡಬೇಕು. ಅದೇ ರೀತಿ ಸಂಜೆ ಕಚೇರಿಯಿಂದ ನಿರ್ಗಮಿಸುವಾಗ ‘Check Out’ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ.
AI ತಂತ್ರಜ್ಞಾನದ ಮೂಲಕ ನಿಗಾ: ಇ-ಆಡಳಿತ ಇಲಾಖೆಯು ಪ್ರತಿದಿನ ಬೆಳಿಗ್ಗೆ 10 ಗಂಟೆಗೆ ಹಾಜರಾತಿ ದಾಖಲಿಸಿದ ಸಿಬ್ಬಂದಿಯ ಜಿಲ್ಲಾವಾರು ಮತ್ತು ಕಚೇರಿವಾರು ಮಾಹಿತಿಯನ್ನು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಮೂಲಕ ಆಯಾ ಇಲಾಖಾ ಮುಖ್ಯಸ್ಥರಿಗೆ ಸ್ವಯಂಚಾಲಿತವಾಗಿ (Automatic) ಕಳುಹಿಸಲಿದೆ.
ಡ್ಯಾಷ್ ಬೋರ್ಡ್ ಪರಿಶೀಲನೆ: ಇಲಾಖಾ ಮುಖ್ಯಸ್ಥರು ತಮ್ಮ ವೈಯಕ್ತಿಕ ಲಾಗಿನ್ ಮೂಲಕ ‘ಕರ್ತವ್ಯ ಡ್ಯಾಷ್ ಬೋರ್ಡ್’ನಲ್ಲಿ ದೈನಂದಿನ ಹಾಜರಾತಿ ವರದಿಯನ್ನು ಪರಿಶೀಲಿಸಬೇಕು. ನಿಗದಿತ ಸಮಯಕ್ಕೆ ಹಾಜರಾತಿ ದಾಖಲಿಸದ ನೌಕರರಿಗೆ ತಕ್ಷಣವೇ ಸೂಕ್ತ ಸೂಚನೆ/ಎಚ್ಚರಿಕೆ ನೀಡಬೇಕಾಗುತ್ತದೆ.
ಒಂದು ವೇಳೆ ಅಧಿಕಾರಿಗಳು ಅಥವಾ ಸಿಬ್ಬಂದಿ ಕಚೇರಿ ಕರ್ತವ್ಯದ ನಿಮಿತ್ತ ಅಧಿಕೃತ ಪ್ರವಾಸದಲ್ಲಿದ್ದರೆ (On Official Duty), ಅವರು ಆ್ಯಪ್ನಲ್ಲಿರುವ ‘OOD’ ಆಯ್ಕೆಯನ್ನು ಬಳಸಿಕೊಂಡು ತಮ್ಮ ಪ್ರವಾಸದ ಉದ್ದೇಶವನ್ನು ನಮೂದಿಸಿ ಹಾಜರಾತಿ ದಾಖಲಿಸಬೇಕು. ಇದನ್ನು ಸಂಬಂಧಪಟ್ಟ ಮೇಲಾಧಿಕಾರಿಗಳು ಪರಿಶೀಲಿಸಿ ದೃಢೀಕರಿಸಬೇಕಾಗುತ್ತದೆ.
ಮಾಹಿತಿ: ನೌಕರರ ಅನುಕೂಲಕ್ಕಾಗಿ ‘ಕರ್ತವ್ಯ ಆ್ಯಪ್’ ಬಳಸುವ ಸರಳ ವಿಧಾನದ ಕುರಿತು ಇ-ಆಡಳಿತ ಇಲಾಖೆಯು ಯೂಟ್ಯೂಬ್ ಲಿಂಕ್ (https://youtu.be/ZNGtSt2mUPY?si=k3rfqZJIMENeF5q) ಮೂಲಕ ವೀಡಿಯೊ ಮಾರ್ಗದರ್ಶನವನ್ನೂ ಬಿಡುಗಡೆ ಮಾಡಿದೆ.
ಮುಖ್ಯಮಂತ್ರಿಗಳ ಈ ದಿಢೀರ್ ಮತ್ತು ಕಟ್ಟುನಿಟ್ಟಿನ ಕ್ರಮದಿಂದಾಗಿ ಸಾರ್ವಜನಿಕರಿಗೆ ಸಕಾಲದಲ್ಲಿ ಸರ್ಕಾರಿ ಸೇವೆಗಳು ಸಿಗುವಂತಾಗಲಿದ್ದು, ಕಚೇರಿಗಳಿಗೆ ತಡವಾಗಿ ಬರುವ ನೌಕರರ ಸೋಗಲಾಡಿತನಕ್ಕೆ ಸಂಪೂರ್ಣ ಬ್ರೇಕ್ ಬೀಳಲಿದೆ ಎಂದು ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ.