ಮೈಸೂರು: ಮೈಸೂರು ನಗರ ಪೊಲೀಸ್ ಘಟಕವು ಕಳ್ಳರು ಹಾಗೂ ವಂಚಕರ ವಿರುದ್ಧ ಬೃಹತ್ ಕಾರ್ಯಾಚರಣೆ ನಡೆಸಿದ್ದು, ಕಳೆದ ಮೂರೇ ತಿಂಗಳಲ್ಲಿ ಬರೋಬ್ಬರಿ 2.09 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ, ಬೆಳ್ಳಿ ಹಾಗೂ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಜಾಲಕ್ಕೆ ಸಂಬಂಧಿಸಿದಂತೆ ಒಟ್ಟು 55 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತರಾದ (ಸಿಪಿ) ಸೀಮಾ ಲಾಟ್ಕರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ಕಾರ್ಯಾಚರಣೆಗಳ ಸಂಪೂರ್ಣ ವಿವರವನ್ನು ಹಂಚಿಕೊಂಡರು.
ಪೊಲೀಸರು ತೀವ್ರ ನಿಗಾ ವಹಿಸಿ ತನಿಖೆ ನಡೆಸಿದ ಪರಿಣಾಮ ಒಟ್ಟು 44 ಪ್ರಕರಣಗಳು ಸುಲಭವಾಗಿ ಪತ್ತೆಯಾಗಿವೆ. ಇದರಲ್ಲಿ 1 ದರೋಡೆ ಸಂಚು, 2 ಸುಲಿಗೆ, 10 ಕನ್ನಗಳ್ಳತನ, 9 ಮನೆಗಳ್ಳತನ, 4 ಮನೆ ಕೆಲಸದವರಿಂದ ಕಳ್ಳತನ, 10 ವಾಹನ ಕಳ್ಳತನ, 5 ಸಾಮಾನ್ಯ ಕಳ್ಳತನ ಹಾಗೂ 3 ವಂಚನೆ ಪ್ರಕರಣಗಳು ಸೇರಿವೆ.
ವಶಪಡಿಸಿಕೊಳ್ಳಲಾದ ಒಟ್ಟು ಮಾಲು:
ಚಿನ್ನಾಭರಣ: 2,09,37,645 ರೂ. ಮೌಲ್ಯದ 1 ಕೆ.ಜಿ 578 ಗ್ರಾಂ 743 ಮಿಲಿ ಗ್ರಾಂ.
ಬೆಳ್ಳಿ: 3 ಕೆ.ಜಿ 578 ಗ್ರಾಂ ಪದಾರ್ಥಗಳು.
ವಾಹನಗಳು: ಕಳುವಾಗಿದ್ದ 10 ವಾಹನಗಳು.
ನಗದು: 2,76,786 ರೂಪಾಯಿ ಹಣ.
ಮಂಡಿ ಪೊಲೀಸ್ ಠಾಣೆ: ಇಬ್ಬರು ಆರೋಪಿಗಳನ್ನು ಬಂಧಿಸಿ, ಅವರಿಂದ ಬರೋಬ್ಬರಿ 90 ಲಕ್ಷ ರೂ. ಮೌಲ್ಯದ 660 ಗ್ರಾಂ ತೂಕದ ಚಿನ್ನದ ಗಟ್ಟಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ವಿಜಯನಗರ ಪೊಲೀಸ್ ಠಾಣೆ: ಮನೆ ಕೆಲಸದವರೇ ಕಳ್ಳತನ ಮಾಡಿದ್ದ 2 ಪ್ರಕರಣಗಳನ್ನು ಪತ್ತೆ ಹಚ್ಚಿ, ಇಬ್ಬರನ್ನು ಬಂಧಿಸಲಾಗಿದೆ. ಇವರಿಂದ 23.50 ಲಕ್ಷ ರೂ. ಮೌಲ್ಯದ 170 ಗ್ರಾಂ ಚಿನ್ನಾಭರಣ ಹಾಗೂ ಗಾರ್ಮೆಂಟ್ಸ್ ಬಟ್ಟೆಗಳನ್ನು ಜಪ್ತಿ ಮಾಡಲಾಗಿದೆ.
ಸಿಸಿಬಿ (CCB) ಪೊಲೀಸರು: 3 ಕನ್ನಗಳ್ಳತನ ಹಾಗೂ 1 ಮನೆಗಳ್ಳತನ ಪ್ರಕರಣಗಳನ್ನು ಭೇದಿಸಿ ಇಬ್ಬರನ್ನು ಬಂಧಿಸಿದ್ದಾರೆ. ಇವರಿಂದ 21 ಲಕ್ಷ ರೂ. ಮೌಲ್ಯದ 173 ಗ್ರಾಂ 260 ಮಿಲಿ ಚಿನ್ನ ವಶಪಡಿಸಿಕೊಳ್ಳಲಾಗಿದೆ. ಇದರೊಂದಿಗೆ, ಮತ್ತೊಂದು ವಂಚನೆ ಪ್ರಕರಣದಲ್ಲಿ ನಾಲ್ವರನ್ನು ಬಂಧಿಸಿ 2,74,000 ರೂ. ನಗದನ್ನು ಜಪ್ತಿ ಮಾಡಿದ್ದಾರೆ.
ಸರಸ್ವತಿಪುರಂ ಪೊಲೀಸ್ ಠಾಣೆ: 4 ಮನೆಗಳ್ಳತನ ಪ್ರಕರಣಗಳನ್ನು ಪತ್ತೆ ಹಚ್ಚಿ, ಇಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದೆ. ಅವರಿಂದ 18.40 ಲಕ್ಷ ರೂ. ಮಾರುಕಟ್ಟೆ ಮೌಲ್ಯದ 143 ಗ್ರಾಂ ಚಿನ್ನವನ್ನು ರಿಕವರಿ ಮಾಡಲಾಗಿದೆ.
ಲಷ್ಕರ್ ಪೊಲೀಸ್ ಠಾಣೆ: ನಾಲ್ವರು ಆರೋಪಿಗಳನ್ನು ಕಂಬಿ ಎಣಿಸುವಂತೆ ಮಾಡಲಾಗಿದ್ದು, 3 ಸಾಮಾನ್ಯ ಕಳ್ಳತನ ಹಾಗೂ 1 ಮನೆ ಕೆಲಸದವರಿಂದ ಕಳ್ಳತನ ಕೇಸ್ ಪತ್ತೆ ಮಾಡಲಾಗಿದೆ. ಇವರಿಂದ 11.45 ಲಕ್ಷ ರೂ. ಮೌಲ್ಯದ 202 ಗ್ರಾಂ ಚಿನ್ನ ಹಾಗೂ 196 ಗ್ರಾಂ ಬೆಳ್ಳಿಯನ್ನು ವಶಪಡಿಸಿಕೊಳ್ಳಲಾಗಿದೆ.
ಸುದ್ದಿಗೋಷ್ಠಿಯ ಸಂದರ್ಭದಲ್ಲೇ, ಕಳ್ಳತನವಾಗಿ ಆತಂಕದಲ್ಲಿದ್ದ ಮೂಲ ವಾರಸುದಾರರನ್ನು (ಮಾಲೀಕರನ್ನು) ಕರೆಯಿಸಿ, ಪೊಲೀಸರು ವಶಪಡಿಸಿಕೊಂಡಿದ್ದ ಅವರ ಚಿನ್ನಾಭರಣ ಹಾಗೂ ವಸ್ತುಗಳನ್ನು ಅಧಿಕೃತವಾಗಿ ಹಸ್ತಾಂತರಿಸಲಾಯಿತು. ಕಳೆದುಹೋದ ತಮ್ಮ ಒಡವೆಗಳನ್ನು ಮರಳಿ ಪಡೆದ ಸಾರ್ವಜನಿಕರು ಮೈಸೂರು ಪೊಲೀಸರ ದಕ್ಷ ಕಾರ್ಯವೈಖರಿಗೆ ಧನ್ಯವಾದ ಅರ್ಪಿಸಿದರು.