ಆನೇಕಲ್: ತಲೆಮರೆಸಿಕೊಂಡಿದ್ದ ಕುಖ್ಯಾತ ರೌಡಿಶೀಟರ್ ಒಬ್ಬ ಬಂಧಿಸಲು ಹೋದ ಪೊಲೀಸ್ ಸಿಬ್ಬಂದಿ ಮೇಲೆಯೇ ಮಾರಕಾಸ್ತ್ರಗಳಿಂದ ಹಲ್ಲೆಗೆ ಯತ್ನಿಸಿದಾಗ, ಆತ್ಮರಕ್ಷಣೆಗಾಗಿ ಪೊಲೀಸರು ಗುಂಡು ಹಾರಿಸಿ ಆತನನ್ನು ಹೆಡೆಮುರಿ ಕಟ್ಟಿರುವ ಘಟನೆ ಹೆಬ್ಬಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಬೆಳ್ಳಂಬೆಳಗ್ಗೆ ನಡೆದಿದೆ.
ಹಲವು ಗಂಭೀರ ಪ್ರಕರಣಗಳಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಜೀವ (19) ಗುಂಡೇಟು ತಿಂದ ಆರೋಪಿಯಾಗಿದ್ದಾನೆ. ಹೆಬ್ಬಗೋಡಿ ಇನ್ಸ್‌ಪೆಕ್ಟರ್ ಸೋಮಶೇಖರ್ ನೇತೃತ್ವದ ಪೊಲೀಸ್ ತಂಡ ಈ ಯಶಸ್ವಿ ಕಾರ್ಯಾಚರಣೆ ನಡೆಸಿದೆ.
ಕೊಲೆ, ಸುಲಿಗೆ, ದರೋಡೆ ಸೇರಿದಂತೆ ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿ ಜೀವ, ಕಳೆದ ವಾರ ಹೆಬ್ಬಗೋಡಿ ಮತ್ತು ಎಲೆಕ್ಟ್ರಾನಿಕ್ ಸಿಟಿ ಪರಿಸರದಲ್ಲಿ ಸಾರ್ವಜನಿಕರನ್ನು ದರೋಡೆ ನಡೆಸಿ ತಲೆಮರೆಸಿಕೊಂಡಿದ್ದ. ಈತನ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದರು. ಇಂದು ಬೆಳ್ಳಂಬೆಳಗ್ಗೆ ಆನೇಕಲ್ ತಾಲ್ಲೂಕಿನ ಸಿಂಗೇನಾ ಅಗ್ರಹಾರದ ತೋಪು ಪ್ರದೇಶದಲ್ಲಿ ಆರೋಪಿ ಅಡಗಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಇನ್ಸ್‌ಪೆಕ್ಟರ್ ಸೋಮಶೇಖರ್ ಮತ್ತು ತಂಡ ದಾಳಿ ನಡೆಸಿತ್ತು.
ಪೊಲೀಸರು ಆರೋಪಿಯನ್ನು ಸುತ್ತುವರೆದು ಬಂಧಿಸಲು ಮುಂದಾದಾಗ, ರೌಡಿಶೀಟರ್ ಜೀವ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೆಬ್ಬಗೋಡಿ ಠಾಣೆಯ ಸಿಬ್ಬಂದಿ ನಾಗೇಶ್ ಅವರ ಮೇಲೆ ಮಾರಕಾಸ್ತ್ರಗಳಿಂದ ಏಕಾಏಕಿ ಹಲ್ಲೆಗೆ ಯತ್ನಿಸಿದ್ದಾನೆ. ಈ ವೇಳೆ ಪರಿಸ್ಥಿತಿಯನ್ನು ಹತೋಟಿಗೆ ತರಲು ಮತ್ತು ಸಿಬ್ಬಂದಿಯ ಆತ್ಮರಕ್ಷಣೆಗಾಗಿ ಸಬ್ ಇನ್‌ಸ್ಪೆಕ್ಟರ್ ಅಯ್ಯಪ್ಪ ಅವರು ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆ.
ಗುಂಡೇಟಿನಿಂದ ಗಾಯಗೊಂಡಿರುವ ಆರೋಪಿ ಜೀವ ಹಾಗೂ ಹಲ್ಲೆಯಿಂದ ಗಾಯಗೊಂಡಿರುವ ಪೊಲೀಸ್ ಸಿಬ್ಬಂದಿಯನ್ನು ತಕ್ಷಣವೇ ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಮುಂದಿನ ತನಿಖೆ ಮುಂದುವರಿದಿದೆ.
ಪ್ರದೇಶದಲ್ಲಿ ಸಾರ್ವಜನಿಕರ ಶಾಂತಿಗೆ ಭಂಗ ತರುತ್ತಿದ್ದ ರೌಡಿಸಂ ಮಟ್ಟ ಹಾಕಲು ಸಕಾಲದಲ್ಲಿ ಕಠಿಣ ಮತ್ತು ಖಡಕ್ ಕ್ರಮ ಕೈಗೊಂಡ ಹೆಬ್ಬಗೋಡಿ ಪೊಲೀಸರ ಈ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಿಂದ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ.