ನಂಜನಗೂಡು: ಇಲ್ಲಿನ ಪ್ರಸಿದ್ಧ ನೆಸ್ಲೆ ಪ್ರೈವೇಟ್ ಲಿಮಿಟೆಡ್ ಕಾರ್ಖಾನೆಯ ಲ್ಯಾಬ್ ಒಳಗೆ ಗುತ್ತಿಗೆ ಆಧಾರದ ಕಾರ್ಮಿಕರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಧೈರ್ಯಗೇಡಿನ ಘಟನೆ ನಡೆದಿದೆ. ಸಹೋದ್ಯೋಗಿಗಳ ನಿರಂತರ ಮಾನಸಿಕ ಕಿರುಕುಳವೇ ಈ ಸಾವಿಗೆ ಕಾರಣ ಎಂದು ಮೃತರು ಬರೆದಿಟ್ಟಿರುವ ಡೆತ್‌ನೋಟ್‌ನಿಂದ ತಿಳಿದುಬಂದಿದೆ.
ನಂಜನಗೂಡು ತಾಲ್ಲೂಕಿನ ಹಂಡುವಿನಹಳ್ಳಿ ಗ್ರಾಮದ ನಿವಾಸಿ ಕುಮಾರಸ್ವಾಮಿ (48) ಆತ್ಮಹತ್ಯೆಗೆ ಶರಣಾದ ದುರ್ದೈವಿ ಕಾರ್ಮಿಕ.
ಮೂಲತಃ ನಂಜನಗೂಡು ತಾಲ್ಲೂಕಿನ ಕಪ್ಪಸೋಗೆ ಗ್ರಾಮದವರಾದ ಕುಮಾರಸ್ವಾಮಿ ಅವರು ಸದ್ಯ ಪತ್ನಿಯ ತವರೂರಾದ ಹಂಡುವಿನಹಳ್ಳಿ ಗ್ರಾಮದಲ್ಲಿ ವಾಸವಿದ್ದರು. ಗ್ರಾಮದ ಶ್ರೀ ಮಹದೇಶ್ವರ ಸ್ವಾಮಿ ದೇವಾಲಯದ ಅರ್ಚಕರಾಗಿಯೂ ಸೇವೆ ಸಲ್ಲಿಸುತ್ತಿದ್ದ ಇವರು, ನಂಜನಗೂಡಿನ ನೆಸ್ಲೆ ಕಾರ್ಖಾನೆಯ ಪ್ರಯೋಗಾಲಯದಲ್ಲಿ (ಲ್ಯಾಬ್) ಕಳೆದ ಸುಮಾರು 25 ವರ್ಷಗಳಿಂದ ಗುತ್ತಿಗೆ ಆಧಾರದ ಮೇಲೆ ನಿಷ್ಠೆಯಿಂದ ಕೆಲಸ ನಿರ್ವಹಿಸುತ್ತಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಸಹೋದ್ಯೋಗಿಗಳಿಂದ ತೀವ್ರ ಕಿರುಕುಳ ಎದುರಿಸುತ್ತಿದ್ದರು ಎನ್ನಲಾಗಿದೆ.
ಕುಮಾರಸ್ವಾಮಿ ಅವರು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಸುದೀರ್ಘವಾದ ಡೆತ್‌ನೋಟ್ (ಮರಣ ಪತ್ರ) ಬರೆದಿಟ್ಟಿದ್ದಾರೆ. ಅದರಲ್ಲಿ ಕಾರ್ಖಾನೆಯ ಸಹೋದ್ಯೋಗಿಗಳಾದ ವಿದ್ಯಾಶ್ರೀ, ರಾಘವೇಂದ್ರ ಮತ್ತು ದಿನೇಶ್ ಎಂಬುವವರೇ ನೇರವಾಗಿ ನನ್ನ ಸಾವಿಗೆ ಕಾರಣ ಎಂದು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ಈ ಮೂವರ ಮಾನಸಿಕ ಕಿರುಕುಳ ಮತ್ತು ತಾರತಮ್ಯ ತಾಳಲಾರದೇ ನಾನು ಈ ಕಠಿಣ ನಿರ್ಧಾರ ಕೈಗೊಳ್ಳುತ್ತಿದ್ದೇನೆ ಎಂದು ಪತ್ರದಲ್ಲಿ ಬರೆದಿದ್ದಾರೆ ಎನ್ನಲಾಗಿದೆ.
ಕಾರ್ಖಾನೆಯ ಒಳಗೇ ಈ ಘಟನೆ ನಡೆದಿರುವುದು ಮೃತರ ಕುಟುಂಬಸ್ಥರು ಹಾಗೂ ಸಂಬಂಧಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. 25 ವರ್ಷಗಳ ಕಾಲ ನಿಷ್ಠೆಯಿಂದ ದುಡಿದ ವ್ಯಕ್ತಿಗೆ ಕಿರುಕುಳ ನೀಡಿ ಸಾವಿನ ದೂಡಿದ್ದಾರೆ ಎಂದು ಆರೋಪಿಸಿರುವ ಸಂಬಂಧಿಕರು, ಡೆತ್‌ನೋಟ್‌ನಲ್ಲಿ ಹೆಸರಿಸಲಾಗಿರುವ ವಿದ್ಯಾಶ್ರೀ, ರಾಘವೇಂದ್ರ ಹಾಗೂ ದಿನೇಶ್ ವಿರುದ್ಧ ತಕ್ಷಣವೇ ಕಾನೂನು ಕ್ರಮ ಕೈಗೊಂಡು ನಮಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.
ಸ್ಥಳಕ್ಕೆ ನಂಜನಗೂಡು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಮರಣ ಪತ್ರವನ್ನು ವಶಕ್ಕೆ ಪಡೆದಿರುವ ಪೊಲೀಸರು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ.
