Police Roundup

ಕೊಡಗು: ಕಾವೇರಿ ನದಿಯಲ್ಲಿ ಮುಳುಗಿ ನಾಗಾಲ್ಯಾಂಡ್ ಮೂಲದ ಇಬ್ಬರು ಯುವಕರ ದುರ್ಮರಣ!

Share News

ಕುಶಾಲನಗರ: ಇಲ್ಲಿನ ಕಾವೇರಿ ನದಿಯ ದಡದಲ್ಲಿ ಪಾರ್ಟಿ ಮಾಡಿ, ಬಳಿಕ ಈಜಲು ನದಿಗಿಳಿದಿದ್ದ ನಾಗಾಲ್ಯಾಂಡ್ ಮೂಲದ ಇಬ್ಬರು ವಲಸೆ ಯುವಕರು ನದಿಯ ಆಳವಾದ ಗುಂಡಿಗೆ ಸಿಲುಕಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಧಾರುಣ ಘಟನೆ ಬುಧವಾರ ಸಂಜೆ ನಡೆದಿದೆ.

​ನಾಗಾಲ್ಯಾಂಡ್ ರಾಜ್ಯದ ನಿವಾಸಿಗಳಾದ ಬಸೋಸೊ ಕುಂ ಚಂಗ್ (23) ಹಾಗೂ ಯಾಂಕಾಂಗ್ (27) ಕಾವೇರಿ ನದಿಯಲ್ಲಿ ಜಲಸಮಾಧಿಯಾದ ದುರ್ದೈವಿ ಯುವಕರಾಗಿದ್ದಾರೆ.

 

ಮೃತಪಟ್ಟ ಯುವಕರಿಬ್ಬರು ಕುಶಾಲನಗರದ ಪ್ರಸಿದ್ಧ ಹೋಟೆಲ್ ಒಂದರಲ್ಲಿ ಕಾರ್ಮಿಕರಾಗಿ ಕೆಲಸ ನಿರ್ವಹಿಸುತ್ತಿದ್ದರು. ಬುಧವಾರದಂದು ಕೆಲಸಕ್ಕೆ ರಜೆ ಹಾಕಿದ್ದ ಇಬ್ಬರು ಯುವಕರು, ತಮ್ಮೊಂದಿಗೆ ಕೆಲಸ ಮಾಡುತ್ತಿದ್ದ ಮತ್ತೊಬ್ಬ ಯುವತಿಯ ಜೊಗೂಡಿ ಸಂಜೆ ವೇಳೆ ಕುಶಾಲನಗರದ ರಸೂಲ್ ಲೇಔಟ್ ಬಳಿಯಿರುವ ಕಾವೇರಿ ನದಿ ತೀರಕ್ಕೆ ವಿಹಾರಕ್ಕೆ ತೆರಳಿದ್ದರು.

 

ನದಿ ದಡದಲ್ಲಿ ಮೂವರೂ ಸೇರಿ ಪಾರ್ಟಿ ಮಾಡಿದ್ದಾಗಿ ತಿಳಿದುಬಂದಿದೆ. ಪಾರ್ಟಿ ಮುಗಿದ ನಂತರ ಇಬ್ಬರು ಯುವಕರು ಮಾತ್ರ ನದಿಯಲ್ಲಿ ಈಜಲು ನೀರಿಗೆ ಇಳಿದಿದ್ದಾರೆ. ಆದರೆ, ನದಿಯ ಆಳ ಮತ್ತು ಅಲ್ಲಿನ ನೀರಿನ ಸುಳಿಯ ಬಗ್ಗೆ ಕಲ್ಪನೆ ಇಲ್ಲದ ಕಾರಣ, ಇಬ್ಬರೂ ನದಿಯಲ್ಲಿದ್ದ ಆಳವಾದ ಗುಂಡಿಗೆ ಸಿಲುಕಿ ಮುಳುಗಿದ್ದಾರೆ. ಇದನ್ನು ಕಂಡು ತೀರದಲ್ಲಿದ್ದ ಯುವತಿ ತಕ್ಷಣವೇ ಸ್ಥಳೀಯರಿಗೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ.

 

ವಿಷಯ ತಿಳಿಯುತ್ತಿದ್ದಂತೆಯೇ ಕುಶಾಲನಗರ ನಗರ ಠಾಣೆಯ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಆದರೆ, ಘಟನೆ ನಡೆದ ಕೆಲವೇ ಸಮಯದಲ್ಲಿ ಕತ್ತಲು ಆವರಿಸಿದ್ದರಿಂದ ಮತ್ತು ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದರಿಂದ ಬುಧವಾರ ರಾತ್ರಿ ಮೃತದೇಹಗಳ ಶೋಧ ಕಾರ್ಯ ನಡೆಸಲು ಸಾಧ್ಯವಾಗಿಲ್ಲ. ಗುರುವಾರ ಬೆಳಗ್ಗೆಯಿಂದಲೇ ಈಜುಗಾರರ ಸಹಾಯದೊಂದಿಗೆ ಮೃತದೇಹಗಳ ಪತ್ತೆಗಾಗಿ ತೀವ್ರ ಕಾರ್ಯಾಚರಣೆ ಮುಂದುವರಿಸಲಾಗಿದೆ.

​ಘಟನೆಗೆ ಸಂಬಂಧಿಸಿದಂತೆ ಕುಶಾಲನಗರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮೃತರ ಪೋಷಕರಿಗೆ ಹಾಗೂ ನಾಗಾಲ್ಯಾಂಡ್‌ನಲ್ಲಿರುವ ಸಂಬಂಧಿಕರಿಗೆ ಮಾಹಿತಿ ರವಾನಿಸಿದ್ದಾರೆ.

 


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin