ರಾಯಚೂರು: ಬಸ್ ನಿಲ್ದಾಣದಲ್ಲಿ ಒಂಟಿ ಮಹಿಳೆಯ ಜೊತೆ ಅಸಭ್ಯವಾಗಿ ವರ್ತಿಸಿ, ಚುಡಾಯಿಸಲು ಯತ್ನಿಸಿದ ಕಾಮುಕನಿಗೆ ಮಹಿಳೆಯೊಬ್ಬರು ಸಾರ್ವಜನಿಕವಾಗಿಯೇ ಹಿಗ್ಗಾಮುಗ್ಗಾ ಥಳಿಸಿ ತಕ್ಕ ಪಾಠ ಕಲಿಸಿರುವ ಧೀಮಂತ ಘಟನೆ ರಾಯಚೂರು ನಗರದಲ್ಲಿ ನಡೆದಿದೆ. ಕಿರುಕುಳ ನೀಡಿದ ವ್ಯಕ್ತಿಯ ಕಣ್ಣಿಗೆ ನೇರವಾಗಿ ಖಾರದ ಪುಡಿ ಎರಚಿ, ಬಳಿಕ ಕಟ್ಟಿಗೆಯಿಂದ ಸಾರ್ವಜನಿಕವಾಗಿ ಧರ್ಮದೇಟು ನೀಡಿದ ಮಹಿಳೆಯ ಧೈರ್ಯದ ದೃಶ್ಯಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ.
ರಾಯಚೂರು ಬಸ್ ನಿಲ್ದಾಣದ ಆವರಣದಲ್ಲಿ ಅಸಭ್ಯವಾಗಿ ವರ್ತಿಸಿ ಸಾರ್ವಜನಿಕವಾಗಿ ಮಹಿಳೆಯ ಕೈಗೆ ಸಿಕ್ಕಿಬಿದ್ದು ಧರ್ಮದೇಟು ತಿಂದ ಭಂಡನನ್ನು ರಾಜು ಬೊಮ್ಮನಾಳ ಎಂದು ಗುರುತಿಸಲಾಗಿದೆ.
ರಾಯಚೂರು ಬಸ್ ನಿಲ್ದಾಣದ ಆವರಣದಲ್ಲಿ ರಾಜು ಬೊಮ್ಮನಾಳ ಎಂಬಾತ ಮಹಿಳೆಯೊಬ್ಬರನ್ನು ಹಿಂಬಾಲಿಸಿ, ಅಸಭ್ಯವಾಗಿ ವರ್ತಿಸುತ್ತಾ ಮಾನಸಿಕವಾಗಿ ಪೀಡಿಸುತ್ತಿದ್ದ ಎನ್ನಲಾಗಿದೆ. ಸಾಮಾನ್ಯವಾಗಿ ಇಂತಹ ಸಂದರ್ಭಗಳಲ್ಲಿ ಹೆಣ್ಣುಮಕ್ಕಳು ಹೆದರಿ ಅಥವಾ ಮುಜುಗರದಿಂದ ಅಲ್ಲಿಂದ ಹೊರಟುಹೋಗುತ್ತಾರೆ. ಆದರೆ, ಈ ಗಟ್ಟಿಗಿತ್ತಿ ಧೈರ್ಯಗೆಡದೆ ಆತನಿಗೆ ಸ್ಥಳದಲ್ಲೇ ಬುದ್ಧಿ ಕಲಿಸಲು ನಿರ್ಧರಿಸಿದ್ದಾರೆ.
ತಕ್ಷಣವೇ ಸಮಯಪ್ರಜ್ಞೆ ಮೆರೆದ ಮಹಿಳೆ, ಪಕ್ಕದಲ್ಲೇ ಇದ್ದ ಹೋಟೆಲ್‌ಗೆ ಓಡಿ ಅಲ್ಲಿಂದ ಖಾರದ ಪುಡಿಯನ್ನು ತಂದು, ಯಾರಿಗೂ ತಿಳಿಯದಂತೆ ರಾಜು ಬೊಮ್ಮನಾಳನ ಕಣ್ಣಿಗೆ ನೇರವಾಗಿ ಎರಚಿದ್ದಾರೆ. ಖಾರದ ಪುಡಿಯ ಉರಿಯಿಂದಾಗಿ ಆತ ಕಣ್ಣು ಕಾಣಿಸದೆ ರಸ್ತೆಯಲ್ಲೇ ಒದ್ದಾಡುತ್ತಿದ್ದಂತೆ, ಅಲ್ಲೇ ಬಿದ್ದಿದ್ದ ಗಟ್ಟಿಮುಟ್ಟಾದ ಕಟ್ಟಿಗೆಯನ್ನು ಕೈಗೆತ್ತಿಕೊಂಡ ಮಹಿಳೆ ಆತನಿಗೆ ಸಾರ್ವಜನಿಕವಾಗಿಯೇ ಧರ್ಮದೇಟು ನೀಡಲು ಆರಂಭಿಸಿದರು.
ಮಹಿಳೆ ತೀವ್ರ ಆಕ್ರೋಶದಿಂದ ವ್ಯಕ್ತಿಯನ್ನು ಹಿಗ್ಗಾಮುಗ್ಗಾ ತಳಿಸುತ್ತಿದ್ದಾಗ ಬಸ್ ನಿಲ್ದಾಣದಲ್ಲಿದ್ದ ಕೆಲ ಸಾರ್ವಜನಿಕರು ಜಗಳ ಬಿಡಿಸಲು ಬಂದಿದ್ದಾರೆ. ಈ ವೇಳೆ ಮತ್ತಷ್ಟು ಗರಂ ಆದ ಮಹಿಳೆ, “ನನ್ನ ಮೇಲೆ ಯಾರಾದರೂ ಬೇಕಿದ್ದರೆ ಪೊಲೀಸ್ ಕೇಸ್ ಹಾಕಲಿ, ಅದಕ್ಕೆ ನಾನು ಹೆದರಲ್ಲ. ಆದರೆ ಹೆಣ್ಣುಮಕ್ಕಳ ಜೊತೆ ಅಸಭ್ಯವಾಗಿ ಆಡುವ ಇಂತಹ ಭಂಡರನ್ನು ಮಾತ್ರ ನಾನು ಸುಮ್ಮನೆ ಬಿಡಲ್ಲ” ಎಂದು ಬಹಿರಂಗವಾಗಿಯೇ ಸವಾಲು ಹಾಕಿ ತಳಿಸಿದ್ದಾರೆ. ತಪ್ಪು ಮಾಡಿದ ವ್ಯಕ್ತಿಗೆ ಸ್ಥಳದಲ್ಲೇ ಪ್ರತ್ಯಕ್ಷ ಸಾಕ್ಷಿಯಾಗಿ ತಕ್ಕ ಪಾಠ ಕಲಿಸಿದ ಮಹಿಳೆಯ ಧೈರ್ಯ ಮತ್ತು ಸಮಯಪ್ರಜ್ಞೆಯನ್ನು ನೆಟ್ಟಿಗರು ಮುಕ್ತಕಂಠದಿಂದ ಮೆಚ್ಚಿಕೊಂಡಿದ್ದಾರೆ.
ಈ ಇಡೀ ಹಲ್ಲೆ ಹಾಗೂ ಹೈಡ್ರಾಮಾ ಘಟನೆಯು ರಾಯಚೂರಿನ ಸದರಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ವಿಷಯ ತಿಳಿದ ಸದರಬಜಾರ್ ಪೊಲೀಸರು ತಕ್ಷಣವೇ ಬಸ್ ನಿಲ್ದಾಣದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿ ರಾಜು ಬೊಮ್ಮನಾಳನನ್ನು ವಶಕ್ಕೆ ಪಡೆದಿರುವ ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.