ವೆಲ್ಲೂರು: ಸಿನಿಮಾ ಸ್ಟೈಲ್ನಲ್ಲಿ ತನ್ನ ಪ್ರಿಯಕರನನ್ನು ಮೆಚ್ಚಿಸಲು ಹೋಗಿ, ಉಪ ಪೊಲೀಸ್ ವರಿಷ್ಠಾಧಿಕಾರಿ (DSP) ಸಮವಸ್ತ್ರ ಧರಿಸಿ ಸಾರ್ವಜನಿಕವಾಗಿ ಓಡಾಡುತ್ತಿದ್ದ ಖತರ್ನಾಕ್ ಮಹಿಳೆಯೊಬ್ಬಳು ತಮಿಳುನಾಡಿನ ವೆಲ್ಲೂರು ಪೊಲೀಸರ ಬಲೆಗೆ ಬಿದ್ದಿದ್ದಾಳೆ.
ಬಂಧಿತೆಯನ್ನು ಉಮಾಮಹೇಶ್ವರಿ (33) ಎಂದು ಗುರುತಿಸಲಾಗಿದೆ. ಈಕೆ ಈಗಾಗಲೇ ವಿವಾಹಿತೆಯಾಗಿದ್ದು, ಮೂವರು ಮಕ್ಕಳ ತಾಯಿಯಾಗಿದ್ದಾಳೆ. ಪತಿ ಕೃಷಿ ಕೆಲಸ ಮಾಡಿಕೊಂಡಿದ್ದರೂ, ಈಕೆಗೆ ಲಾರಿ ಚಾಲಕನೊಬ್ಬನ ಜೊತೆ ವಿವಾಹೇತರ ಸಂಬಂಧವಿತ್ತು ಎಂದು ತಿಳಿದುಬಂದಿದೆ.
ಮಾಹಿತಿಯ ಪ್ರಕಾರ, ಉಮಾಮಹೇಶ್ವರಿಗೆ ಪೊಲೀಸ್ ಸಮವಸ್ತ್ರ ಧರಿಸಬೇಕೆಂಬ ಹಂಬಲ ಬಹಳ ದಿನಗಳಿಂದ ಇತ್ತು. ತನ್ನ ಪ್ರಿಯಕರನ ಹುಟ್ಟುಹಬ್ಬದ ದಿನ ಆತನಿಗೆ ದೊಡ್ಡದಾಗಿ ಇಂಪ್ರೆಸ್ ಮಾಡಲು ‘ಡಿಎಸ್ಪಿ’ ವೇಷದಲ್ಲಿ ಕಾಣಿಸಿಕೊಳ್ಳಲು ಪ್ಲಾನ್ ಮಾಡಿದ್ದಳು. ಇದಕ್ಕಾಗಿ ಪ್ರಿಯಕರನೇ ಖುದ್ದಾಗಿ ಡಿಎಸ್ಪಿ ಸಮವಸ್ತ್ರ ಮತ್ತು ಅದಕ್ಕೆ ಬೇಕಾದ ಪರಿಕರಗಳನ್ನು ಬಾಡಿಗೆಗೆ ತಂದುಕೊಟ್ಟಿದ್ದ ಎನ್ನಲಾಗಿದೆ.
ಕೆಲ ದಿನಗಳ ಹಿಂದೆ ಪಕ್ಕಾ ಡಿಎಸ್ಪಿ ಗೆಟಪ್ನಲ್ಲಿ ವೆಲ್ಲೂರು ಕೋಟೆ ಪ್ರದೇಶಕ್ಕೆ ಬಂದಿದ್ದ ಉಮಾಮಹೇಶ್ವರಿ, ಪ್ರಿಯಕರನ ಜೊತೆ ಸಾರ್ವಜನಿಕವಾಗಿಯೇ ಹುಟ್ಟುಹಬ್ಬ ಆಚರಿಸಿ ಕೇಕ್ ಕತ್ತರಿಸಿದ್ದಳು. ಆದರೆ, ಅದೇ ರಸ್ತೆಯಲ್ಲಿ ಗಸ್ತು ತಿರುಗುತ್ತಿದ್ದ ಅಸಲಿ ಪೊಲೀಸರಿಗೆ ಈಕೆಯ ಅತಿಯಾದ ಹಾವಭಾವ ಮತ್ತು ವರ್ತನೆ ತೀವ್ರ ಅನುಮಾನ ಮೂಡಿಸಿದೆ.
ಅನುಮಾನದ ಮೇಲೆ ಪೊಲೀಸರು ಆಕೆಯನ್ನುApproach ಮಾಡಿ, “ಮೇಡಂ, ನೀವು ಯಾವ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೀರಿ?” ಎಂದು ಕೇಳಿದ್ದಾರೆ. ಈ ವೇಳೆ ಗಾಬರಿಯಾದ ಉಮಾಮಹೇಶ್ವರಿ ಗೊಂದಲಕಾರಿ ಉತ್ತರ ನೀಡುತ್ತಾ ತಡಬಡಾಯಿಸಿದ್ದಾಳೆ. ತಕ್ಷಣವೇ ಅಲರ್ಟ್ ಆದ ಪೊಲೀಸರು ಆಕೆಯನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದಾಗ ಅಸಲಿ ಕಥೆ ಬಯಲಾಗಿದೆ.
ಸಾರ್ವಜನಿಕರನ್ನು ದಾರಿ ತಪ್ಪಿಸಿದ ಮತ್ತು ಅನುಮತಿಯಿಲ್ಲದೆ ಪೊಲೀಸ್ ಸಮವಸ್ತ್ರ ದುರುಪಯೋಗಪಡಿಸಿಕೊಂಡ ಆರೋಪದಡಿ ಪೊಲೀಸರು ಪ್ರಕರಣ ದಾಖಲಿಸಿ ಮಹಿಳೆಯನ್ನು ಬಂಧಿಸಿದ್ದಾರೆ. ಇಷ್ಟೇ ಅಲ್ಲದೆ, ಪೊಲೀಸರು ಈಕೆಯ ಹಿನ್ನೆಲೆ ಕೆದಕಿದಾಗ ಮತ್ತೊಂದು ಶಾಕಿಂಗ್ ವಿಷಯ ಬೆಳಕಿಗೆ ಬಂದಿದೆ. ಈ ‘ನಕಲಿ ಡಿಎಸ್ಪಿ’ ಉಮಾಮಹೇಶ್ವರಿ ವಿರುದ್ಧ ಚೆನ್ನೈನ ವಿವಿಧ ಪೊಲೀಸ್ ಠಾಣೆಗಳಲ್ಲಿ ಈಗಾಗಲೇ ಹಲವು ಕಳ್ಳತನ ಪ್ರಕರಣಗಳು ದಾಖಲಾಗಿವೆ ಎಂದು ತನಿಖೆಯಿಂದ ತಿಳಿದುಬಂದಿದೆ. ಲವರ್ಗೆ ಇಂಪ್ರೆಸ್ ಮಾಡಲು ಹೋದಾಕೆ ಈಗ ಕಂಬಿ ಎಣಿಸುವಂತಾಗಿದೆ.