Skip to main content

Police Roundup

ಪಶುವೈದ್ಯರ ನೇಮಕಾತಿ ಗೊಂದಲ: ಮೋಸದ ಎಫ್‌ಐಆರ್ ಆರೋಪ; ಕಷ್ಟಪಟ್ಟು ಓದಿದ ಅಭ್ಯರ್ಥಿಗಳ ಭವಿಷ್ಯಂತ್ರಕ್ಕೆ ಕುತಂತ್ರ?

Share News

ವಿಶೇಷ ವರದಿ: ಕರ್ನಾಟಕ ಲೋಕಸೇವಾ ಆಯೋಗ (KPSC) ನಡೆಸಿದ ಪಶುವೈದ್ಯರ ನೇಮಕಾತಿ ಪರೀಕ್ಷೆಯಲ್ಲಿ ಭಾರೀ ಗೋಲ್ಮಾಲ್ ನಡೆದಿದೆ ಎಂಬ ಆರೋಪಗಳು ಮತ್ತು ಅದರ ಬೆನ್ನಲ್ಲೇ ದಾಖಲಾಗಿರುವ ಎಫ್‌ಐಆರ್ (FIR) ಈಗ ಹೊಸ ವಿವಾದಕ್ಕೆ ಕಾರಣವಾಗಿದೆ. ಹಣವಂತರಿಗೆ ಮಣೆ ಹಾಕಲು ವ್ಯವಹಾರ ನಡೆದಿದೆ ಎನ್ನಲಾದ ಆಡಿಯೋ ತುಣುಕುಗಳು ಹೊರಬಿದ್ದಿದ್ದು, ಒಟ್ಟು 29 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರಸ್ತುತ ಸಿಐಡಿ (CID) ಎಸ್‌ಪಿ ಲೋಕೇಶ್ ಅವರ ನೇತೃತ್ವದಲ್ಲಿ ಚುರುಕಿನ ತನಿಖೆ ನಡೆಯುತ್ತಿದ್ದು, ಅಕ್ರಮ ಎಸಗಿದವರು ಶೀಘ್ರದಲ್ಲೇ ಸಿಕ್ಕಿಬೀಳಲಿದ್ದಾರೆ.

 

​ಆದರೆ, ಈ ತನಿಖೆಯ ನೆಪದಲ್ಲಿ ಅರ್ಹ ಹಾಗೂ ಶ್ರಮಜೀವಿ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತಿದೆ ಎಂಬ ಗಂಭೀರ ಆಕ್ರೋಶ ಕೇಳಿಬಂದಿದೆ.

ಸೋರಿಕೆಯಾಗಿರುವ ಆಡಿಯೋದಲ್ಲಿ ₹80 ಲಕ್ಷ ಲಂಚದ ಮಾತುಕತೆ ನಡೆದಿದೆ ಎನ್ನಲಾಗಿದೆ. ಆದರೆ, ತನಿಖಾ ಸಂಸ್ಥೆಗಳು ಕೇವಲ ಟಾಪ್ ರ್ಯಾಂಕ್ ಗಳಿಸಿದ ಅಭ್ಯರ್ಥಿಗಳನ್ನೇ ಗುರಿಯಾಗಿಸಿಕೊಂಡು ಎಫ್‌ಐಆರ್‌ನಲ್ಲಿ ಹೆಸರು ಸೇರಿಸುತ್ತಿವೆ ಎಂಬ ಆರೋಪ ಕೇಳಿಬಂದಿದೆ. ಎಫ್‌ಐಆರ್‌ನಲ್ಲಿ ಹೆಸರಿರುವ ಹಲವರು ಬಡ ರೈತರ ಮಕ್ಕಳಾಗಿದ್ದು, ₹80 ಲಕ್ಷ ಲಂಚ ಕೊಡುವಷ್ಟು ಆರ್ಥಿಕ ಶಕ್ತಿ ಅವರಿಗಿಲ್ಲ.

​”ನಮ್ಮ ಅಪ್ಪ ಸಾಮಾನ್ಯ ರೈತ. ನನ್ನ ಬಳಿ ₹80 ಲಕ್ಷ ಕೊಡುವಷ್ಟು ಹಣವಿದ್ದರೆ, ಅದನ್ನು ಬೇರೆ ಉದ್ಯೋಗ ಅಥವಾ ಉದ್ಯಮಕ್ಕೆ ಬಳಸಿಕೊಳ್ಳುತ್ತಿದ್ದೆ ಹೊರತು ಪರೀಕ್ಷೆಗೆ ಲಂಚ ನೀಡುತ್ತಿರಲಿಲ್ಲ. ಕಷ್ಟಪಟ್ಟು ಓದಿ ರ್ಯಾಂಕ್ ತೆಗೆದಿದ್ದಕ್ಕೆ ನಮಗೆ ಈ ಶಿಕ್ಷೆಯೇ?” ಎಂದು ಅಭ್ಯರ್ಥಿಯೊಬ್ಬರು ಅಳಲು ತೋಡಿಕೊಂಡಿದ್ದಾರೆ.

ಅಕ್ರಮ ಎಸಗಿದವರನ್ನು ಪತ್ತೆಹಚ್ಚಿ, ಸೂಕ್ತ ತನಿಖೆ ನಡೆಸಿ ನೇಮಕಾತಿಯಿಂದ ಕೈಬಿಡಲಿ ಹಾಗೂ ಜೈಲಿಗಟ್ಟಲಿ. ಆದರೆ, ಆಯ್ಕೆಯಾಗದ ಕೆಲವರು ತಮ್ಮ ಸ್ವಾರ್ಥಕ್ಕಾಗಿ ಇಡೀ ಪರೀಕ್ಷಾ ಪ್ರಕ್ರಿಯೆಯನ್ನೇ ರದ್ದುಗೊಳಿಸಿ ‘ಮರು ಪರೀಕ್ಷೆ’ಗೆ (Re-exam) ಆಗ್ರಹಿಸುತ್ತಿರುವುದು ಯಾವ ನ್ಯಾಯ? ಎಂದು ಆಯ್ಕೆಯಾದ ಅಭ್ಯರ್ಥಿಗಳು ಪ್ರಶ್ನಿಸುತ್ತಿದ್ದಾರೆ.

 

​ಕಳೆದ 10 ವರ್ಷಗಳಿಂದ ಹಗಲಿರುಳು ಶ್ರಮಿಸಿ, ಕಷ್ಟಪಟ್ಟು ಪರೀಕ್ಷೆ ಬರೆದು ಉತ್ತಮ ಅಂಕಗಳೊಂದಿಗೆ ಆಯ್ಕೆಯಾದ ಅಭ್ಯರ್ಥಿಗಳ ಭವಿಷ್ಯ ಈಗ ತೂಗುಉಯ್ಯಲೆಯಲ್ಲಿದೆ. ಯಾರೋ ಕೆಲವರು ಮಾಡಿದ ತಪ್ಪಿಗೆ ಅಥವಾ ಆಯ್ಕೆಯಾಗದವರ ಕುತಂತ್ರಕ್ಕೆ ಇಡೀ ಪ್ರಕ್ರಿಯೆಯನ್ನು ತಡೆಹಿಡಿಯುವುದು ಅಥವಾ ಮರು ಪರೀಕ್ಷೆ ನಡೆಸುವುದು ಕಷ್ಟಪಟ್ಟು ಓದಿದ ಅಭ್ಯರ್ಥಿಗಳಿಗೆ ಎಸಗುವ ಮಹಾದ್ರೋಹವಾಗಲಿದೆ.

 

​ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಲಿ, ಆದರೆ ಯಾವುದೇ ಕಾರಣಕ್ಕೂ ನಿರಪರಾಧಿ ಮತ್ತು ಅರ್ಹ ಅಭ್ಯರ್ಥಿಗಳಿಗೆ ಅನ್ಯಾಯವಾಗಬಾರದು ಎಂಬುದು ಅಭ್ಯರ್ಥಿಗಳ ಒಕ್ಕೊರಲ ಆಗ್ರಹವಾಗಿದೆ.

 


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin