ಹೊಸದಿಲ್ಲಿ: ಯುಪಿಐ (UPI) ವಹಿವಾಟುಗಳ ಮೇಲೆ ಶೀಘ್ರದಲ್ಲೇ ಶುಲ್ಕ ವಿಧಿಸಲಾಗುತ್ತದೆ ಎಂಬ ವದಂತಿಗಳಿಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದ್ದು, ಸಣ್ಣ ವ್ಯಾಪಾರಿಗಳು ಹಾಗೂ ಗ್ರಾಹಕರಿಗೆ ದೊಡ್ಡ ನಿರಾಳತೆ ಸಿಕ್ಕಂತಾಗಿದೆ.
’ಪೇಮೆಂಟ್ ಅಂಡ್ ಸೆಟಲ್ಮೆಂಟ್ ಸಿಸ್ಟಮ್ಸ್ (ತಿದ್ದುಪಡಿ) ಮಸೂದೆ, 2026′ ಹಿನ್ನೆಲೆಯಲ್ಲಿ ಯುಪಿಐ ಮೇಲೆ ‘ಮರ್ಚಂಟ್ ಡಿಸ್ಕೌಂಟ್ ರೇಟ್’ (MDR) ಶುಲ್ಕ ಜಾರಿಯಾಗಬಹುದು ಎಂಬ ಆತಂಕ ಸೃಷ್ಟಿಯಾಗಿತ್ತು. ಈ ಕುರಿತು ಸ್ಪಷ್ಟನೆ ನೀಡಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಪ್ರಸ್ತುತ ಯುಪಿಐ ವಹಿವಾಟುಗಳ ಮೇಲೆ ಯಾವುದೇ ಶುಲ್ಕ ವಿಧಿಸುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ತಿಳಿಸಿದ್ದಾರೆ.
ಗ್ರಾಹಕರಿಗೆ ಉಚಿತ ಸೇವೆ ಮುಂದುವರಿಕೆ:
ಕೇಂದ್ರ ಸರ್ಕಾರದ ನಿರ್ಧಾರದಂತೆ ಗ್ರಾಹಕರು ಯುಪಿಐ ಬಳಸಿದ್ದಕ್ಕಾಗಿ ಯಾವುದೇ ಹೆಚ್ಚುವರಿ ಶುಲ್ಕ ತೆರಬೇಕಾಗಿಲ್ಲ. ಹಾಗೆಯೇ ಕಿರಾಣಿ ಅಂಗಡಿಗಳು, ಬೀದಿಬದಿ ವ್ಯಾಪಾರಿಗಳು ಸೇರಿದಂತೆ ಸಣ್ಣ ಉದ್ಯಮಿಗಳು ಪಾವತಿ ಸ್ವೀಕರಿಸಲು ಯಾವುದೇ ಎಂಡಿಆರ್ (MDR) ಶುಲ್ಕ ಪಾವತಿಸುವ ಅಗತ್ಯವಿಲ್ಲ ಎಂದು ‘ಪೇಮೆಂಟ್ ಕೌನ್ಸಿಲ್ ಆಫ್ ಇಂಡಿಯಾ’ (PCI) ಸ್ಪಷ್ಟಪಡಿಸಿದೆ.
ಏನಿದು ಎಂಡಿಆರ್ (MDR) ಶುಲ್ಕ?
ಡಿಜಿಟಲ್ ಪಾವತಿಗಳನ್ನು ಪ್ರಕ್ರಿಯೆಗೊಳಿಸುವುದಕ್ಕಾಗಿ ಬ್ಯಾಂಕ್‌ಗಳು ಅಥವಾ ಪೇಮೆಂಟ್ ಸೇವಾ ಸಂಸ್ಥೆಗಳು ವ್ಯಾಪಾರಿಗಳಿಂದ ವಸೂಲಿ ಮಾಡುವ ಶುಲ್ಕವನ್ನು ಎಂಡಿಆರ್ ಎನ್ನಲಾಗುತ್ತದೆ. 2016ರಲ್ಲಿ ಆರಂಭವಾದ ಯುಪಿಐ ಸೇವೆ ಸಂಪೂರ್ಣ ಉಚಿತವಾಗಿರುವುದರಿಂದಲೇ ದೇಶದಲ್ಲಿ ಡಿಜಿಟಲ್ ಕ್ರಾಂತಿ ಸಾಧ್ಯವಾಗಿದ್ದು, ಪ್ರಸ್ತುತ ಉಚಿತ ಸೇವೆಯೇ ಮುಂದುವರಿಯಲಿದೆ.