ಬೆಂಗಳೂರು: ನಗರದಲ್ಲಿ ಆಂತರಿಕ ಭದ್ರತೆ ಮತ್ತು ಸಾರ್ವಜನಿಕರ ಸುರಕ್ಷತೆಯ ಹಿತದೃಷ್ಟಿಯಿಂದ ಅಕ್ರಮ ವಲಸಿಗರ ಪತ್ತೆಗೆ ಕೈಗೊಂಡಿದ್ದ ‘ಆಪರೇಷನ್ ಮುಕ್ತ’ ವಿಶೇಷ ಕಾರ್ಯಾಚರಣೆಯಲ್ಲಿ 53 ಬಾಂಗ್ಲಾದೇಶಿ ಅಕ್ರಮ ವಲಸಿಗರನ್ನು ಪೊಲೀಸರು ಬಂಧಿಸಿದ್ದಾರೆ.
ಎಲೆಕ್ಟ್ರಾನಿಕ್ ಸಿಟಿ ಹಾಗೂ ವೈಟ್ಫೀಲ್ಡ್ ವಿಭಾಗಗಳಲ್ಲಿ ಶನಿವಾರ ನಡೆಸಿದ ಬೃಹತ್ ದಾಳಿಯಲ್ಲಿ ಅಂದಾಜು 3,000 ಶಂಕಿತರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಲಾಗಿತ್ತು. ಸೂಕ್ತ ದಾಖಲೆಗಳಿಲ್ಲದೆ ಅಕ್ರಮವಾಗಿ ನೆಲೆಸಿದ್ದ ವೈಟ್ಫೀಲ್ಡ್ ವಿಭಾಗದ 38 ಹಾಗೂ ಎಲೆಕ್ಟ್ರಾನಿಕ್ ಸಿಟಿ ವಿಭಾಗದ 15 ಬಾಂಗ್ಲಾದೇಶಿಯರನ್ನು ಬಂಧಿಸಿ, ನೆಲಮಂಗಲದ ಸೊಂಡೆಕೊಪ್ಪ ಬಳಿಯ ವಲಸಿಗರ ತಡೆ ಕೇಂದ್ರಕ್ಕೆ ಕಳುಹಿಸಲಾಗಿದೆ.
50ಕ್ಕೂ ಹೆಚ್ಚು ಸ್ಥಳಗಳಲ್ಲಿ ತಪಾಸಣೆ:
ಎಲೆಕ್ಟ್ರಾನಿಕ್ ಸಿಟಿ ಡಿಸಿಪಿ ಎಂ. ನಾರಾಯಣ್ ಹಾಗೂ ವೈಟ್ಫೀಲ್ಡ್ ಡಿಸಿಪಿ ಸೈದುಲ್ಲಾ ಅಡಾವತ್ ಅವರ ನೇತೃತ್ವದಲ್ಲಿ 23 ಪಡೆಗಳನ್ನು ರಚಿಸಿ, 50ಕ್ಕೂ ಹೆಚ್ಚು ಕಟ್ಟಡ ನಿರ್ಮಾಣ ಪ್ರದೇಶಗಳು ಹಾಗೂ ಶೆಡ್ಗಳ ಮೇಲೆ ದಾಳಿ ನಡೆಸಲಾಯಿತು. ಪರಪ್ಪನ ಅಗ್ರಹಾರ, ಹುಳಿಮಾವು, ಬಂಡೇಪಾಳ್ಯ, ಬೇಗೂರು, ಎಲೆಕ್ಟ್ರಾನಿಕ್ ಸಿಟಿ ಮತ್ತು ಹೆಬ್ಬಗೋಡಿ ಠಾಣಾ ವ್ಯಾಪ್ತಿಗಳಲ್ಲಿ ಈ ಪರಿಶೀಲನೆ ನಡೆದಿದೆ.
ಮನೆ/ಶೆಡ್ ಮಾಲೀಕರಿಗೆ ಪೊಲೀಸರ ಖಡಕ್ ಸೂಚನೆ:
ಯಾವುದೇ ವ್ಯಕ್ತಿಗೆ ಮನೆ, ಶೆಡ್ ಬಾಡಿಗೆಗೆ ನೀಡುವ ಮುನ್ನ ಅಥವಾ ಕೆಲಸಕ್ಕೆ ಸೇರಿಸಿಕೊಳ್ಳುವ ಮುನ್ನ ಅವರ ಆಧಾರ್, ಪಾಸ್ಪೋರ್ಟ್ ಹಾಗೂ ಪೌರತ್ವ ದಾಖಲೆಗಳನ್ನು ಕಟ್ಟುನಿಟ್ಟಾಗಿ ಪರಿಶೀಲಿಸಬೇಕು ಎಂದು ಸಾರ್ವಜನಿಕರಿಗೆ ಮತ್ತು ಕಟ್ಟಡ ಮಾಲೀಕರಿಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.