ಬಳ್ಳಾರಿ: ನಗರದಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆ ನಿಯಂತ್ರಣ, ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಸುಧಾರಣೆ ಹಾಗೂ ಮೂಲಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕೆಂದು ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ತಾಕೀತು ಮಾಡಿದ್ದಾರೆ.
ನೂತನ ಜಿಲ್ಲಾಡಳಿತ ಭವನದ ವೀಡಿಯೋ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಭೆಯಲ್ಲಿ ಕೈಗೊಂಡ ಪ್ರಮುಖ ನಿರ್ಧಾರಗಳು ಹಾಗೂ ನೀಡಿದ ಸೂಚನೆಗಳು:
ಟ್ರಾಫಿಕ್ ದಟ್ಟಣೆ ನಿಯಂತ್ರಣ ಮತ್ತು ಬೈಪಾಸ್ ಮಾರ್ಗ: ನಗರದಲ್ಲಿ ಭಾರಿ ಸರಕು ವಾಹನಗಳ ದಟ್ಟಣೆ ತಡೆಯಲು ಹೊಸಪೇಟೆ ಬೈಪಾಸ್ ಹಾಗೂ ಚೆಕ್‌ಪೋಸ್ಟ್‌ಗಳ ಮೂಲಕ ಮಾರ್ಗ ಬದಲಾವಣೆಗೆ ಕ್ರಿಯಾ ಯೋಜನೆ ಸಿದ್ಧಪಡಿಸಲು ನಿರ್ದೇಶಿಸಲಾಯಿತು.
13 ಸ್ಥಳಗಳಲ್ಲಿ ನೂತನ ‘ಬಸ್ ಬೇ’ ನಿರ್ಮಾಣ: ಪಾದಚಾರಿಗಳು ಹಾಗೂ ಸಾರಿಗೆ ಸುಗಮಗೊಳಿಸಲು ಲೋಕೋಪಯೋಗಿ ಇಲಾಖೆ ಮತ್ತು ಮಹಾನಗರ ಪಾಲಿಕೆ ಜಂಟಿ ಪರಿಶೀಲನೆ ನಡೆಸಿ ಜಾಗ ಲಭ್ಯತೆಯ ವರದಿ ನೀಡಿದ ತಕ್ಷಣವೇ 13 ಕಡೆ ಬಸ್ ಬೇ ನಿರ್ಮಿಸಲು ಸಮ್ಮತಿಸಲಾಯಿತು.
ವೇಗ ಮಿತಿ ಮತ್ತು ‘ಸ್ಕೂಲ್ ಝೋನ್’ ಬೋರ್ಡ್: ಶಾಲೆ ಹಾಗೂ ಆಸ್ಪತ್ರೆಗಳ ಪ್ರದೇಶಗಳಲ್ಲಿ ಗರಿಷ್ಠ ವೇಗವನ್ನು 40 ಕಿ.ಮೀ/ಗಂಟೆಗೆ ನಿಗದಿಪಡಿಸಿ, ವರದಿ ಬಂದ ಒಂದು ವಾರದೊಳಗೆ ಕಡ್ಡಾಯವಾಗಿ ‘ವೇಗ ಮಿತಿ ಬೋರ್ಡ್’ಗಳನ್ನು ಸ್ಥಾಪಿಸಲು ಸೂಚಿಸಲಾಯಿತು.
ಫುಟ್‌ಪಾತ್ ಅತಿಕ್ರಮಣ ತೆರವು: ಪಾದಚಾರಿಗಳ ಸುರಕ್ಷತೆಗೆ ಅಡ್ಡಿಯಾಗಿರುವ ಅತಿಕ್ರಮಣಗಳನ್ನು ತೆರವುಗೊಳಿಸಲು ಪಾಲಿಕೆ ಮತ್ತು ಪೊಲೀಸರನ್ನೊಳಗೊಂಡ ವಿಶೇಷ ತಂಡ ರಚಿಸಿ ಕಾರ್ಯಾಚರಣೆ ನಡೆಸಲು ಆದೇಶಿಸಲಾಯಿತು.
ರೈಲ್ವೇ ಸರಕು ಸಾಗಣೆ ಸಮನ್ವಯ: ಪೀಕ್ ಅವರ್ ಹೊರತುಪಡಿಸಿ ಸಿಮೆಂಟ್ ಹಾಗೂ ರಸಗೊಬ್ಬರ ಲೋಡಿಂಗ್/ಅನ್‌ಲೋಡಿಂಗ್ ಮಾಡಲು ರೈಲ್ವೇ ಅಧಿಕಾರಿಗಳೊಂದಿಗೆ ಸಮನ್ವಯ ಸಭೆ ನಡೆಸಲು ನಿರ್ಧರಿಸಲಾಯಿತು.
ಲಾರಿ ಟರ್ಮಿನಲ್ ಸುಧಾರಣೆ: ಟ್ರಕ್ ಟರ್ಮಿನಲ್‌ನಲ್ಲಿ ಲೈಟಿಂಗ್ ಹಾಗೂ ನೈರ್ಮಲ್ಯ ಕೊರತೆ ಸರಿಪಡಿಸಿ ಮೂಲಸೌಕರ್ಯ ಮೇಲ್ದರ್ಜೆಗೇರಿಸಲು ಕ್ರಮ ವಹಿಸಲಾಗುವುದು ಎಂದು ಪಾಲಿಕೆ ಆಯುಕ್ತರು ತಿಳಿಸಿದರು.
ಪ್ರಿಪೇಡ್ ಆಟೋ ಸೇವೆ ಮತ್ತು ‘ವಿಶೇಷ ಡ್ರೈವ್’:
ರಾತ್ರಿ ವೇಳೆ ಆಟೋ ಚಾಲಕರು ಅತಿಯಾದ ಬಾಡಿಗೆ ವಸೂಲಿ ಮಾಡುವುದನ್ನು ತಡೆಯಲು ಹೊಸ ಬಸ್ ನಿಲ್ದಾಣ, ರೈಲ್ವೇ ನಿಲ್ದಾಣ ಮತ್ತು ಬಿಎಂಸಿಆರ್‌ಸಿ ಮುಂಭಾಗದಲ್ಲಿ ಪ್ರಿಪೇಡ್ ಆಟೋ ಸೇವೆ ಆರಂಭಿಸಲು ನಿರ್ಧರಿಸಲಾಯಿತು. ಆರ್‌ಟಿಒ, ಪೊಲೀಸ್ ಹಾಗೂ ಚಾಲಕರ ಸಂಘಟನೆಗಳ ಜೊತೆ ಚರ್ಚಿಸಿ ಸ್ಥಿರ ದರಪಟ್ಟಿ ನಿಗದಿಪಡಿಸಲು ಜಿಲ್ಲಾಧಿಕಾರಿ ಸೂಚಿಸಿದರು.
ಇದಲ್ಲದೆ, ಆಗಸ್ಟ್ 15 ರಿಂದ ನಗರದಲ್ಲಿ ಸಂಚರಿಸುವ ಆಟೋಗಳ ದಾಖಲೆ ಪರಿಶೀಲನೆ ಹಾಗೂ ಅನಧಿಕೃತ ಬಿಳಿ ಬೋರ್ಡ್ ವಾಹನಗಳ ವಿರುದ್ಧ ‘ವಿಶೇಷ ಡ್ರೈವ್’ ನಡೆಸಲಾಗುವುದು ಎಂದು ಸಂಚಾರ ಪೊಲೀಸ್ ಇನ್ಸ್‌ಪೆಕ್ಟರ್ ರುದ್ರಪ್ಪ ತಿಳಿಸಿದರು.
”ಸಭೆಯಲ್ಲಿ ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರವೂ ಸಾರ್ವಜನಿಕರ ಸುರಕ್ಷತೆಯ ಮೇಲೆ ನೇರ ಪರಿಣಾಮ ಬೀರುತ್ತದೆ. ಇದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು, ಯಾವುದೇ ನಿಷ್ಕಾಳಜಿಯನ್ನು ಸಹಿಸುವುದಿಲ್ಲ.”
— ನಾಗೇಂದ್ರ ಪ್ರಸಾದ್.ಕೆ, ಜಿಲ್ಲಾಧಿಕಾರಿಗಳು
ಸಭೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತ ಪಿ.ಎಸ್.ಮಂಜುನಾಥ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನವೀನ್ ಕುಮಾರ್ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.