ಹುಣಸೂರು: ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ಲಕ್ಷಾಂತರ ರೂಪಾಯಿ ಲಂಚ ಪಡೆಯುತ್ತಿದ್ದ ಹುಣಸೂರು ಉಪವಿಭಾಗಾಧಿಕಾರಿ (ಎಸಿ) ಕಾವ್ಯಾರಾಣಿ ಅವರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಲೋಕಾಯುಕ್ತ ಡಿವೈಎಸ್ಪಿ ಶೈಲೇಂದ್ರ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಎಸಿ ಕಾವ್ಯಾರಾಣಿ ಹಾಗೂ ಅವರ ಕಚೇರಿಯ ಗುಮಾಸ್ತ ಶಿವಕುಮಾರ್ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಎಚ್.ಡಿ. ಕೋಟೆ ತಾಲೂಕಿನಲ್ಲಿರುವ 4.5 ಎಕರೆ ಜಮೀನಿನ ಕಂದಾಯ ಮೇಲ್ಮನವಿಯನ್ನು ಇತ್ಯರ್ಥಪಡಿಸಿಕೊಡಲು ಎಸಿ ಕಾವ್ಯಾರಾಣಿ ಅವರು ಒಟ್ಟು 10.50 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಈ ಪೈಕಿ ಈಗಾಗಲೇ 5 ಲಕ್ಷ ರೂಪಾಯಿಗಳನ್ನು ಮುಂಗಡವಾಗಿ ಪಡೆದುಕೊಂಡಿದ್ದರು.
ಬಾಕಿ ಉಳಿದ 5.50 ಲಕ್ಷ ರೂಪಾಯಿ ಹಣವನ್ನು ಸ್ವೀಕರಿಸಲು ಗುಮಾಸ್ತ ಶಿವಕುಮಾರ್ ಅವರನ್ನು ಮನೆಗೆ ಕರೆಸಿಕೊಂಡಿದ್ದರು.
ಗುಮಾಸ್ತ ಶಿವಕುಮಾರ್ ಮೂಲಕ ಹಣವನ್ನು ಪಡೆದುಕೊಳ್ಳುತ್ತಿದ್ದಾಗ, ನಿಖರ ಮಾಹಿತಿ ಮೇರೆಗೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ಹಣ ಸಮೇತ ಗುಮಾಸ್ತ ಹಾಗೂ ಎಸಿ ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ.
ದಾಳಿಯ ಬೆನ್ನಲ್ಲೇ ಲೋಕಾಯುಕ್ತ ಅಧಿಕಾರಿಗಳ ತಂಡವು ಹುಣಸೂರಿನ ಎಸಿ ಕಚೇರಿ ಹಾಗೂ ಎಸಿ ಕಾವ್ಯಾರಾಣಿ ಅವರ ಅಧಿಕೃತ ನಿವಾಸದಲ್ಲಿ ಸುದೀರ್ಘ ಪರಿಶೀಲನೆ ನಡೆಸಿದ್ದು, ಪ್ರಮುಖ ಕಡತಗಳನ್ನು ಜಪ್ತಿ ಮಾಡಿದೆ. ಪ್ರಸ್ತುತ ಎಸಿ ಕಾವ್ಯಾರಾಣಿ ಹಾಗೂ ಗುಮಾಸ್ತ ಶಿವಕುಮಾರ್ ಲೋಕಾಯುಕ್ತರ ವಶದಲ್ಲಿದ್ದು, ತೀವ್ರ ವಿಚಾರಣೆ ಎದುರಿಸುತ್ತಿದ್ದಾರೆ.