Skip to main content

Police Roundup

ಗಂಡನಿಂದಲೇ ಹೆಂಡತಿಯ ಭೀಕರ ಕೊಲೆ: ಬಿಹಾರದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಕುಂಬಳಗೋಡು ಪೊಲೀಸರ ಬಲೆಗೆ

Share News

ಬೆಂಗಳೂರು: ಪ್ರೀತಿಸಿ ಮದುವೆಯಾಗಿದ್ದ ಹೆಂಡತಿಯನ್ನು ಕತ್ತು ಹಿಸುಕಿ ಕೊಲೆ ಮಾಡಿ, ಮೃತದೇಹವನ್ನು ಬೆಡ್ ಶೀಟ್‌ನಲ್ಲಿ ಸುತ್ತಿಟ್ಟು ಪರಾರಿಯಾಗಿದ್ದ ಗಂಡನನ್ನು ಕುಂಬಳಗೋಡು ಠಾಣೆ ಪೊಲೀಸರು ಬಿಹಾರದಲ್ಲಿ ಬಂಧಿಸಿದ್ದಾರೆ.

 

​ಬಂಧಿತ ಆರೋಪಿಯನ್ನು ಧೀರಜ್ ಕುಮಾರ್ (೨೪) ಎಂದು ಗುರುತಿಸಲಾಗಿದೆ. ಈತನ ಹೆಂಡತಿ ರೀಮಾಕುಮಾರಿ (೨೧) ಕೊಲೆಯಾದ ದುರ್ದೈವಿ.

 

ಬಿಹಾರ ಮೂಲದ ಈ ಜೋಡಿ ಪರಸ್ಪರ ಪ್ರೀತಿಸುತ್ತಿದ್ದು, ಮನೆಯವರ ವಿರೋಧದ ನಡುವೆಯೂ ಮನೆ ಬಿಟ್ಟು ಬಂದಿದ್ದರು. ಸುಮಾರು ೧೦ ತಿಂಗಳ ಹಿಂದೆ ಬೆಂಗಳೂರಿಗೆ ಆಗಮಿಸಿದ್ದ ಇಬ್ಬರೂ, ಕುಟುಂಬದವರಿಗೆ ತಿಳಿಸದೆ ನಗರದಲ್ಲೇ ಮದುವೆಯಾಗಿದ್ದರು. ಕುಂಬಳಗೋಡು ಬಳಿಯ ಗೇರುಪಾಳ್ಯದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.

 

​ಇತ್ತೀಚೆಗೆ ಇಬ್ಬರ ನಡುವೆ ಕೌಟುಂಬಿಕ ಕಲಹ ಉಂಟಾಗಿ ಜಗಳ ತೀವ್ರಗೊಂಡಿತ್ತು. ಜುಲೈ ೨೭ರಂದು ಜಗಳ ವಿಕೋಪಕ್ಕೆ ತಿರುಗಿದಾಗ ಧೀರಜ್ ಕುಮಾರ್ ಹೆಂಡತಿ ರೀಮಾಕುಮಾರಿಯ ಕತ್ತು ಹಿಸುಕಿ ಕೊಲೆ ಮಾಡಿದ್ದ. ಬಳಿಕ ಮೃತದೇಹವನ್ನು ಬೆಡ್ ಶೀಟ್‌ನಲ್ಲಿ ಸುತ್ತಿ ಮನೆಗೆ ಬೀಗ ಹಾಕಿ ತನ್ನ ಸ್ವಂತ ರಾಜ್ಯವಾದ ಬಿಹಾರಕ್ಕೆ ಪರಾರಿಯಾಗಿದ್ದ.

ಘಟನೆ ನಡೆದ ನಾಲ್ಕು ದಿನಗಳ ಬಳಿಕ ಮನೆಯಿಂದ ದುರ್ವಾಸನೆ ಬರತೊಡಗಿದ್ದರಿಂದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಕುಂಬಳಗೋಡು ಪೊಲೀಸರು ಬಾಗಿಲು ಮುರಿದು ಒಳಪ್ರವೇಶಿಸಿದಾಗ ರೀಮಾಕುಮಾರಿಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಚುರುಕುಗೊಳಿಸಿದ್ದರು.

 

​ವಿಶೇಷ ಪೊಲೀಸ್ ತಂಡವು ಬಿಹಾರಕ್ಕೆ ತೆರಳಿ ಕಾರ್ಯಾಚರಣೆ ನಡೆಸಿ, ಕೊಲೆ ನಡೆದ ಒಂದು ವಾರದೊಳಗೆ ಆರೋಪಿ ಧೀರಜ್ ಕುಮಾರ್‌ನನ್ನು ಬಂಧಿಸಿ ಕರೆತರುವಲ್ಲಿ ಯಶಸ್ವಿಯಾಗಿದೆ.

 


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin