Skip to main content

Police Roundup

ಹಾಡಹಗಲೇ ಭೀಕರ ದರೋಡೆ ಯತ್ನ: ಜ್ಯುವೆಲರಿ ಮಾಲೀಕನ ಕಾಲಿಗೆ ಗುಂಡಿಕ್ಕಿ ದುಷ್ಕರ್ಮಿಗಳ ಪರಾರಿ

Share News

ನೆಲಮಂಗಲ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ದಾಬಸ್‌ಪೇಟೆಯಲ್ಲಿ ಹಾಡಹಗಲೇ ಭೀಕರ ದರೋಡೆ ಯತ್ನ ನಡೆದಿದ್ದು, ಬಂದೂಕುಧಾರಿ ದುಷ್ಕರ್ಮಿಗಳು ಚಿನ್ನದ ಅಂಗಡಿ ಮಾಲೀಕನ ಮೇಲೆ ಗುಂಡಿನ ದಾಳಿ ನಡೆಸಿ ಪರಾರಿಯಾಗಿರುವ ಆಘಾತಕಾರಿ ಘಟನೆ ಸಂಭವಿಸಿದೆ.

 

​ದಾಬಸ್‌ಪೇಟೆಯ ಪ್ರಸಿದ್ಧ ‘ಪ್ರೇಮ್ ಶಿವ ಜೂವೆಲರ್ಸ್’ ಅಂಗಡಿಯಲ್ಲಿ ಈ ಕೃತ್ಯ ನಡೆದಿದ್ದು, ಮಾಲೀಕ ಕುನ್ನಾರಾಮ್ ಅವರ ಬಲಗಾಲಿಗೆ ಗುಂಡೇಟು ಬಿದ್ದಿದೆ.

ಕಾರಿನಲ್ಲಿ ಬಂದಿದ್ದ ಸಶಸ್ತ್ರ ದುಷ್ಕರ್ಮಿಗಳ ತಂಡ ಏಕಾಏಕಿ ಪ್ರೇಮ್ ಶಿವ ಜೂವೆಲರ್ಸ್ ಅಂಗಡಿಗೆ ನುಗ್ಗಿ ಚಿನ್ನಾಭರಣಗಳನ್ನು ದೋಚಲು ಯತ್ನಿಸಿದೆ. ಈ ವೇಳೆ ಜಾಗರೂಕರಾದ ಮಾಲೀಕ ಕುನ್ನಾರಾಮ್ ಅವರು ಧೈರ್ಯದಿಂದ ದರೋಡೆಕೋರರನ್ನು ತಡೆಯಲು ಯತ್ನಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಕಳ್ಳರು ತಮ್ಮಲ್ಲಿದ್ದ ಬಂದೂಕಿನಿಂದ ಕುನ್ನಾರಾಮ್ ಅವರ ಕಾಲಿಗೆ ಗುಂಡು ಹಾರಿಸಿದ್ದಾರೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿರುವ ಕುನ್ನಾರಾಮ್ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಗುಂಡಿನ ಸದ್ದು ಕೇಳಿ ಜನ ಸೇರುತ್ತಿದ್ದಂತೆ ಗಾಬರಿಗೊಂಡ ದರೋಡೆಕೋರರು ಕಳ್ಳತನ ಯತ್ನವನ್ನು ಅರ್ಧಕ್ಕೇ ಕೈಬಿಟ್ಟು ಬಂದಿದ್ದ ಕಾರಿನಲ್ಲೇ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಘಟನಾ ಸ್ಥಳವನ್ನು ಪರಿಶೀಲಿಸಿದಾಗ ಎರಡು ಜೀವಂತ ಗುಂಡುಗಳು ಪತ್ತೆಯಾಗಿವೆ.

 

​ವಿಷಯ ತಿಳಿಯುತ್ತಿದ್ದಂತೆ ದಾಬಸ್‌ಪೇಟೆ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪರಾರಿಯಾಗಿರುವ ಸಶಸ್ತ್ರ ದುಷ್ಕರ್ಮಿಗಳ ಬಂಧನಕ್ಕೆ ಬಲೆ ಬೀಸಿರುವ ಪೊಲೀಸರು, ಸುತ್ತಮುತ್ತಲಿನ ಸಿಸಿಟಿವಿ (CCTV) ದೃಶ್ಯಾವಳಿಗಳನ್ನು ಆಧರಿಸಿ ತನಿಖೆ ಚುರುಕುಗೊಳಿಸಿದ್ದಾರೆ.

 


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin