ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಾಂಗ್ರೆಸ್ ಆಂತರಿಕ ಶಿಸ್ತಿನ ಮುಸುಕು ಸಂಪೂರ್ಣವಾಗಿ ಕಳಚಿ ಬಿದ್ದಿದೆ. ಜಿಲ್ಲಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯ ಸಭೆಯಲ್ಲೇ ಕಾಂಗ್ರೆಸ್ ಕಾರ್ಯಕರ್ತರು ಸಿನಿಮಾ ಶೈಲಿಯಲ್ಲಿ ಹೊಡೆದಾಡಿಕೊಂಡಿದ್ದು, ಘಟನೆಯಲ್ಲಿ ಮಧ್ಯಪ್ರವೇಶಿಸಿದ ಕೇರಳದ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರ ಪುತ್ರ ಹಾಗೂ ಎಐಸಿಸಿ ಸದಸ್ಯ ಚಾಂಡಿ ಉಮ್ಮನ್ ಅವರ ಮೇಲೆಯೇ ಹಲ್ಲೆ ನಡೆಸಿ ನೆಲಕ್ಕೆ ಕೆಡವಿದ ಭೀಕರ ದುರ್ಘಟನೆ ವರದಿಯಾಗಿದೆ.
ಗಲಾಟೆಗೆ ಕಾರಣವೇನು?
ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷರ ಆಯ್ಕೆಗಾಗಿ ಯಲಚೇನಹಳ್ಳಿ ಮಾಜಿ ಕಾರ್ಪೊರೇಟರ್ ಓ. ಮಂಜುನಾಥ್ ಅವರ ಮರು ಆಯ್ಕೆಗೆ ಸಂಬಂಧಿಸಿದಂತೆ, ಬನಶಂಕರಿ ಸಮೀಪದ ಕದಿರೇನಹಳ್ಳಿಯಲ್ಲಿರುವ ಕಲ್ಯಾಣ ಮಂಟಪವೊಂದರಲ್ಲಿ ನಿನ್ನೆ ಮಧ್ಯಾಹ್ನ ಚೀಟಿ ಬರೆದು ಮತ ಚಲಾಯಿಸುವ ಪ್ರಕ್ರಿಯೆ ನಡೆಯುತ್ತಿತ್ತು. ಈ ವೇಳೆ ಸಾಲಿನಲ್ಲಿ ನಿಂತು ಚೀಟಿ ಬರೆಸುವ ಸಣ್ಣ ವಿಚಾರಕ್ಕೆ ಸಂಬಂಧಿಸಿದಂತೆ ಇತ್ತೀಚೆಗಷ್ಟೇ ಕಾಂಗ್ರೆಸ್ ಸೇರಿದ್ದ ಪ್ರಸಾದ್ ಬಾಬು (ಅಲಿಯಾಸ್ ಕಬಡ್ಡಿ ಬಾಬು) ಅವರ ಪುತ್ರ ಪವನ್ ಹಾಗೂ ಯಾರಾಬ್ ನಗರದ ಕಾಂಗ್ರೆಸ್ ಮುಖಂಡ ಸಾಹಿದ್ ನಡುವೆ ಮಾತಿನ ಚಕಮುಕಿ ಆರಂಭವಾಗಿದೆ.
ಈ ಸಣ್ಣ ಗಲಾಟೆ ಕ್ಷಣಾರ್ಧದಲ್ಲಿ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ. ತಕ್ಷಣವೇ ಕಬಡ್ಡಿ ಬಾಬು ಮಗ ಪವನ್, ಪಕ್ಷಕ್ಕೆ ಸಂಬಂಧವಿಲ್ಲದ ಹೊರಗಿನ 20ಕ್ಕೂ ಹೆಚ್ಚು ರೌಡಿ ಶೈಲಿಯ ಯುವಕರನ್ನು ಫೋನ್ ಮಾಡಿ ಸ್ಥಳಕ್ಕೆ ಕರೆಸಿಕೊಂಡಿದ್ದಾನೆ. ಬಂದ ಗೂಂಡಾ ಪಡೆ ಸಾಹಿದ್ ಎಂಬಾತನ ಮೇಲೆ ರಕ್ತಸಿಕ್ತ ದಾಳಿ ನಡೆಸಿದೆ.
30ಕ್ಕೂ ಹೆಚ್ಚು ಚೇರ್ಗಳು ಪುಡಿಪುಡಿ, ಎಐಸಿಸಿ ಸದಸ್ಯನಿಗೆ ಗಾಯ:
ಸಭೆಯಲ್ಲಿದ್ದ ಸುಮಾರು 30ಕ್ಕೂ ಹೆಚ್ಚು ಪ್ಲಾಸ್ಟಿಕ್ ಚೇರ್ಗಳನ್ನು ಪುಡಿಪುಡಿ ಮಾಡಿ ಉಭಯ ಬಣಗಳು ಹೊಡೆದಾಡಿಕೊಂಡಿವೆ. ಘಟನೆಯ ಚುನಾವಣಾ ಉಸ್ತುವಾರಿ ವಹಿಸಿಕೊಂಡಿದ್ದ ಕೇರಳದ ಶಾಸಕ ಚಾಂಡಿ ಉಮ್ಮನ್, ಗಾಯಗೊಂಡ ಸಾಹಿದ್ನನ್ನು ರಕ್ಷಿಸಲು ತಮ್ಮ ಕಾರಿನಲ್ಲಿ ಕುಳ್ಳಿರಿಸಿಕೊಂಡು ಹೊರಡಲುತ್ನಿಸಿದರು. ಈ ವೇಳೆ ರೊಚ್ಚಿಗೆದ್ದ ಗುಂಪು ಸಾಹಿದ್ನನ್ನು ಕಾರಿನಿಂದ ಹೊರಗೆಳೆದು ಥಳಿಸುವ ಬರದಲ್ಲಿ, ಚಾಂಡಿ ಉಮ್ಮನ್ ಅವರನ್ನು ಬಲವಂತವಾಗಿ ಎಳೆದಾಡಿ ನೆಲಕ್ಕೆ ಕೆಡವಿದ್ದಾರೆ.
ಪದ್ಮನಾಭನಗರದ ಮಾಜಿ ವಾರ್ಡ್ ಅಧ್ಯಕ್ಷ ಪವನ್ ಹಾಗೂ ಸಾಹಿದ್ ಕೊರಳುಪಟ್ಟಿ ಹಿಡಿದು ಬೀದಿಯಲ್ಲಿ ರೌಡಿಸಂ ಮಾದರಿಯಲ್ಲಿ ಕಿತ್ತಾಡಿಕೊಂಡಿದ್ದು, ರಾಷ್ಟ್ರೀಯ ನಾಯಕರ ಎದುರಲ್ಲೇ ಕಾಂಗ್ರೆಸ್ನಲ್ಲಿ ಒಗ್ಗಟ್ಟಿಲ್ಲ ಎಂಬುದನ್ನು ಬಹಿರಂಗಪಡಿಸಿದೆ.
ಪಕ್ಷದಿಂದ ಉಚ್ಚಾಟನೆಗೆ ಚಿಂತನೆ:
ಬೆಂಗಳೂರು ದಕ್ಷಿಣ ಉಸ್ತುವಾರಿಯೂ ಆಗಿರುವ ಚಾಂಡಿ ಉಮ್ಮನ್ ಅವರು ಸಭೆಯಲ್ಲಿ ನಡೆದ ಈ ಅನಿರೀಕ್ಷಿತ ಮಾರಾಮಾರಿ ಹಾಗೂ ಗೂಂಡಾಗಿರಿಯಿಂದ ಸಂಪೂರ್ಣವಾಗಿ ಬೆಚ್ಚಿಬಿದ್ದಿದ್ದಾರೆ. ಪಕ್ಷದ ಆಂತರಿಕ ಸಭೆಯಲ್ಲಿ ಗೂಂಡಿಗಳನ್ನು ಕರೆಸಿ ಗಲಾಟೆ ಸೃಷ್ಟಿಸಿದ ಪವನ್ ಹಾಗೂ ಸಾಹಿದ್ ಬಣದ ಕಾರ್ಯಕರ್ತರನ್ನು ಕಾಂಗ್ರೆಸ್ನಿಂದ ಉಚ್ಚಾಟನೆ ಮಾಡಲು ಕೆಪಿಸಿಸಿ ಗಂಭೀರ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ. ಈ ಘಟನೆಯಿಂದ ಕಾಂಗ್ರೆಸ್ ಪಕ್ಷದ ಆಂತರಿಕ ಶಿಸ್ತಿನ ಬಣ್ಣ ಬಯಲಾಗಿದೆ.
