Skip to main content

Police Roundup

ಅರ್ಧಕ್ಕೆ ನಿಂತ ಅಂಗನವಾಡಿ ಕಾಮಗಾರಿಗೆ 17.50 ಲಕ್ಷ ಬಿಲ್: ಕಂಟ್ರಾಕ್ಟರ್‌ಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ!

Share News

ದೊಡ್ಡಬಳ್ಳಾಪುರ: ಅಂಗನವಾಡಿ ಕಟ್ಟಡ ನಿರ್ಮಾಣದ ಕಾಮಗಾರಿಯನ್ನು ಪೂರ್ಣಗೊಳಿಸದೆ, ಬಿಡುಗಡೆಯಾಗಿದ್ದ 17.50 ಲಕ್ಷ ರೂಪಾಯಿ ಹಣ ಬಿಲ್ ಮಾಡಿಕೊಂಡು ಕಂಟ್ರಾಕ್ಟರ್‌ಗಳು ಪರಾರಿಯಾಗಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ತಿರುಮಗೊಂಡನಹಳ್ಳಿ ಗ್ರಾಮದ ಯುವಕರು ಗಂಭೀರ ಆರೋಪ ಮಾಡಿದ್ದಾರೆ.

 

​ತಾಲೂಕಿನ ಹಾಡೋನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಿರುಮಗೊಂಡನಹಳ್ಳಿ ಗ್ರಾಮದಲ್ಲಿ ಅಂಗನವಾಡಿ ಕಟ್ಟಡ ನಿರ್ಮಿಸಲು ಮೂರ್ನಾಲ್ಕು ವರ್ಷಗಳ ಹಿಂದೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ನಿರ್ಮಿತಿ ಕೇಂದ್ರ, ಬೆಂ.ಗ್ರಾ. ಜಿಲ್ಲಾ ಪಂಚಾಯಿತಿ ಹಾಗೂ ಹಾಡೋನಹಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಒಟ್ಟು 17.50 ಲಕ್ಷ ರೂಪಾಯಿ ಅನುದಾನ ಬಿಡುಗಡೆಯಾಗಿತ್ತು. ಆದರೆ, ಹಣ ಮಂಜೂರು ಮಾಡಿಸಿಕೊಂಡ ಕಂಟ್ರಾಕ್ಟರ್‌ಗಳು ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿ ಜಾಗ ಖಾಲಿ ಮಾಡಿದ್ದಾರೆ.

 

​ಕಳಪೆ ಕಾಮಗಾರಿ ನಡೆಸಿ ಹಣ ಲೂಟಿ ಆರೋಪ:

ಗ್ರಾಮದ ಯುವಕ ಹರೀಶ್ ಕುಮಾರ್ ಮಾತನಾಡಿ, “ನಮ್ಮ ಗ್ರಾಮದಲ್ಲಿ ವರ್ಷಗಳಿಂದ ಸುಸಜ್ಜಿತ ಕಟ್ಟಡವಿಲ್ಲದೆ ಅಂಗನವಾಡಿ ಮಕ್ಕಳು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಹೊಸ ಕಟ್ಟಡಕ್ಕೆ ಲಕ್ಷಾಂತರ ರೂಪಾಯಿ ಹಣ ಬಿಡುಗಡೆಯಾಗಿದ್ದರೂ, ಕಳಪೆ ಕಾಮಗಾರಿ ನಡೆಸಿ ಸಂಪೂರ್ಣ ಹಣ ಲೂಟಿ ಮಾಡಲಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

​ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಕಟ್ಟಡ ಪೂರ್ಣಗೊಳಿಸುವಂತೆ ಮನವಿ ಮಾಡಿದರೆ ಅಧಿಕಾರಿಗಳು ಉಡಾಫೆ ಉತ್ತರ ನೀಡುತ್ತಿದ್ದಾರೆ. ‘ಅಧಿಕಾರಿಗಳು ಬಿಡದಿದ್ದರೆ ನಾವೇ ಯುವಕರೆಲ್ಲ ಸೇರಿ ಸ್ವಂತ ಖರ್ಚಿನಲ್ಲಿ ಅರ್ಧಕ್ಕೆ ನಿಂತ ಕಾಮಗಾರಿ ಪೂರ್ಣಗೊಳಿಸುತ್ತೇವೆ’ ಎಂದರೂ ಅದಕ್ಕೂ ಅನುಮತಿ ನೀಡುತ್ತಿಲ್ಲ ಎಂದು ಯುವಕರು ದೂರಿದ್ದಾರೆ.

 

​ಬೀಗ ಒಡೆದು ತಾವೇ ಕಾಮಗಾರಿ ಮುಗಿಸುವ ಎಚ್ಚರಿಕೆ:

ಅಧಿಕಾರಿಗಳು ತಕ್ಷಣವೇ ಎಚ್ಚೆತ್ತುಕೊಂಡು ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಇಲ್ಲವಾದಲ್ಲಿ ಅಂಗನವಾಡಿಯ ಬೀಗ ಒಡೆದು, ಗ್ರಾಮದ ಯುವಕರೇ ಸ್ವಂತ ಹಣದಿಂದ ಕಾಮಗಾರಿ ಪೂರ್ಣಗೊಳಿಸಲಿದ್ದೇವೆ. ಈ ಕಟ್ಟಡದ ಉದ್ಘಾಟನೆಗೆ ಯಾವುದೇ ಜನಪ್ರತಿನಿಧಿ ಅಥವಾ ಅಧಿಕಾರಿಗಳನ್ನು ಆಹ್ವಾನಿಸದೆ, ಸಣ್ಣ ಮಕ್ಕಳಿಂದಲೇ ಉದ್ಘಾಟನೆ ನೆರವೇರಿಸಲಿದ್ದೇವೆ ಎಂದು ಯುವಕರು ಖಡಕ್ ಎಚ್ಚರಿಕೆ ನೀಡಿದ್ದಾರೆ.

 


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin