ಬೆಂಗಳೂರು: ಚಿನ್ನಾಭರಣ ಖರೀದಿಸುವ ನೆಪದಲ್ಲಿ ಜ್ಯುವೆಲ್ಲರಿ ಶೋರೂಂಗೆ ನುಗ್ಗಿ ಮಾಲೀಕರ ಗಮನ ಬೇರೆಡೆ ಸೆಳೆದು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನದ ಆಭರಣಗಳನ್ನು ಎಗರಿಸಿದ್ದ ಖದೀಮನನ್ನು ಯಲಹಂಕ ನ್ಯೂ ಟೌನ್ ಠಾಣೆ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ.
ಹರೀಶ್ ಬಂಧಿತ ಆರೋಪಿಯಾಗಿದ್ದು, ಆತನಿಂದ ₹13.20 ಲಕ್ಷ ಮೌಲ್ಯದ 2 ಚಿನ್ನದ ಸರಗಳು ಹಾಗೂ 7 ಚಿನ್ನದ ಉಂಗುರಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಘಟನೆಯ ವಿವರ:
ಅಕ್ಟೋಬರ್ 29 ರಂದು ಯಲಹಂಕದ ಪ್ರಸಿದ್ಧ ‘ಕೃಷ್ಣ ಜ್ಯುವೆಲ್ಲರ್ಸ್’ಗೆ ಬಂದಿದ್ದ ಆರೋಪಿ ಹರೀಶ್, ತನಗೆ ಚಿನ್ನದ ಆಭರಣಗಳನ್ನು ಖರೀದಿಸಬೇಕು ಎಂದು ಹೇಳಿದ್ದಾನೆ. ಅಂಗಡಿ ಮಾಲೀಕರು ತೋರಿಸಿದ ಚಿನ್ನದ ಆಭರಣಗಳ ಪೈಕಿ ಒಮ್ಮೆಲೇ 2 ಸರ ಹಾಗೂ 7 ಉಂಗುರಗಳನ್ನು ಧರಿಸಿಕೊಂಡು, ಕನ್ನಡಿಯಲ್ಲಿ ನೋಡುವಂತೆ ನಾಟಕವಾಡಿದ್ದಾನೆ.
ಆರೋಪಿಯು ಇನ್ನಷ್ಟು ಮಾದರಿಗಳನ್ನು ತೋರಿಸುವಂತೆ ಕೇಳಿದ್ದರಿಂದ ಅಂಗಡಿ ಮಾಲೀಕರು ಬೇರೆ ಆಭರಣಗಳನ್ನು ಹುಡುಕಲು ತೊಡಗಿದ್ದಾರೆ. ಇದನ್ನೇ ಕಾಯುತ್ತಿದ್ದ ಖದೀಮ, ಮಾಲೀಕರ ಗಮನ ಬೇರೆಡೆಗೆ ಹೋದ ಕ್ಷಣದಲ್ಲೇ ಧರಿಸಿದ್ದ ಆಭರಣಗಳೊಂದಿಗೆ ಜಾರಿಕೊಂಡು ಎಸ್ಕೇಪ್ ಆಗಿದ್ದ.
ಪೊಲೀಸರಿಂದ ಆರೋಪಿ ಬಂಧನ:
ಈ ಕಳ್ಳತನದ ಕುರಿತು ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣವನ್ನು ಕೈಗೆತ್ತಿಕೊಂಡ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿ ಹರೀಶ್ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಆತನಿಂದ ಕಳುವಾಗಿದ್ದ ಎಲ್ಲಾ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.