ಬಾಗಲಕೋಟೆ: ಆದಾಯದ ಮೂಲಕ್ಕಿಂತ ಹೆಚ್ಚಿನ ಪ್ರಮಾಣದ ಆಸ್ತಿ ಗಳಿಸಿರುವ ಆರೋಪದ ಹಿನ್ನೆಲೆಯಲ್ಲಿ ಜಮಖಂಡಿ ತಾಲ್ಲೂಕು ಪಂಚಾಯಿತಿಯ ಸಹಾಯಕ ನಿರ್ದೇಶಕ ಸಂಜೀವ್ ಹಿಪ್ಪರಗಿ ಅವರ ನಿವಾಸಗಳ ಮೇಲೆ ಬುಧವಾರ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಶೋಧನೆ ಕೈಗೊಂಡಿದ್ದಾರೆ.
ಎರಡು ಮನೆಗಳಲ್ಲಿ ಏಕಕಾಲಕ್ಕೆ ದಾಳಿ:
ಅಕ್ರಮ ಆಸ್ತಿ ಗಳಿಕೆ ಕುರಿತು ಲಭ್ಯವಾದ ಖಚಿತ ಮಾಹಿತಿಯ ಮೇರೆಗೆ ಬಾಗಲಕೋಟೆ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ ಜಮಖಂಡಿ ನಗರದಲ್ಲಿ ಸಂಜೀವ್ ಹಿಪ್ಪರಗಿ ಅವರು ವಾಸವಿರುವ ಮನೆ ಹಾಗೂ ಅವರ ತಂದೆ ವಾಸವಿರುವ ಮನೆಯ ಮೇಲೆ ಅಧಿಕಾರಿಗಳ ತಂಡ ಏಕಕಾಲದಲ್ಲಿ ದಾಳಿ ನಡೆಸಿದೆ.
ದಾಖಲೆಗಳ ಪರಿಶೀಲನೆ ಮುಂದುವರಿಕೆ:
ಶೋಧನಾ ಕಾರ್ಯಾಚರಣೆಯ ವೇಳೆ ಸ್ಥಿರ ಹಾಗೂ ಚರಾಸ್ತಿಗೆ ಸಂಬಂಧಿಸಿದ ಮಹತ್ವದ ದಾಖಲೆಗಳು, ಬ್ಯಾಂಕ್ ಖಾತೆಗಳು ಹಾಗೂ ಇತರೆ ವಹಿವಾಟುಗಳ ಕುರಿತು ಅಧಿಕಾರಿಗಳು ತೀವ್ರ ಪರಿಶೀಲನೆ ನಡೆಸುತ್ತಿದ್ದಾರೆ. ಶೋಧನಾ ಕಾರ್ಯ ಇನ್ನೂ ಮುಂದುವರಿದಿದ್ದು, ಕಾರ್ಯಾಚರಣೆ ಪೂರ್ಣಗೊಂಡ ಬಳಿಕ ಪತ್ತೆಯಾದ ಒಟ್ಟು ಆಸ್ತಿಯ ನಿಖರ ಮೌಲ್ಯ ಹಾಗೂ ಹೆಚ್ಚಿನ ವಿವರಗಳು ಲಭ್ಯವಾಗಲಿವೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.
ಬಾಗಲಕೋಟೆ, ಬೆಳಗಾವಿ ಹಾಗೂ ಕೊಪ್ಪಳ ಜಿಲ್ಲೆಗಳ ಲೋಕಾಯುಕ್ತ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನೊಳಗೊಂಡ ಜಂಟಿ ತಂಡ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದೆ.