ತುಮಕೂರು: ಪತಿ-ಪತ್ನಿಯ ನಡುವಿನ ಜಗಳ ಬಿಡಿಸಲು ಮಧ್ಯಪ್ರವೇಶಿಸಿದ 16 ವರ್ಷದ ಮಗನನ್ನೇ ಪಾಪಿ ತಂದೆಯೊಬ್ಬ ಹಾರೆಕೋಲಿನಿಂದ ಹೊಡೆದು ಬರ್ಬರವಾಗಿ ಹತ್ಯೆಗೈದಿರುವ ಹೃದಯವಿದ್ರಾವಕ ಘಟನೆ ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಚೌಡನಾಯಕನಪಾಳ್ಯ ಗ್ರಾಮದಲ್ಲಿ ನಡೆದಿದೆ.
ಮೃತ ದುರ್ದೈವಿಯನ್ನು ಸುನೀಲ್ (16) ಎಂದು ಗುರುತಿಸಲಾಗಿದ್ದು, ಕೊಲೆ ಆರೋಪಿ ತಂದೆ ನಂಜೇಗೌಡನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಘಟನೆಯ ಹಿನ್ನೆಲೆ:
ಆರೋಪಿ ನಂಜೇಗೌಡ ತೀವ್ರ ಮದ್ಯವ್ಯಸನಿಯಾಗಿದ್ದು, ಪ್ರತಿನಿತ್ಯ ಕುಡಿದು ಬಂದು ಪತ್ನಿ ರಂಜಿತಾ ಅವರೊಂದಿಗೆ ಜಗಳವಾಡುತ್ತಿದ್ದ. ಈ ಹಿಂದೆಯೂ ಇದೇ ವಿಚಾರವಾಗಿ ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ನಂಜೇಗೌಡ, ಜೈಲು ಶಿಕ್ಷೆ ಅನುಭವಿಸಿ ಹೊರಬಂದಿದ್ದ ಎನ್ನಲಾಗಿದೆ.
ಜಗಳ ಬಿಡಿಸಲು ಹೋದ ಮಗನ ಮೇಲೆ ವಿಕೃತಿ:
ಇಂದು ಬೆಳಗ್ಗೆಯೂ ನಂಜೇಗೌಡ ಮತ್ತು ಪತ್ನಿ ರಂಜಿತಾ ನಡುವೆ ಮತ್ತೆ ಜಗಳ ಶುರುವಾಗಿದೆ. ಮಾತಿಗೆ ಮಾತು ಬೆಳೆದು ಜಗಳ ತಾರಕಕ್ಕೇರಿದಾಗ, ನಂಜೇಗೌಡ ಪತ್ನಿಯ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾನೆ. ತಾಯಿಯನ್ನು ರಕ್ಷಿಸಲು ಮುಂದಾದ ಪುತ್ರ ಸುನೀಲ್, ಇಬ್ಬರ ಜಗಳ ಬಿಡಿಸಲು ಮಧ್ಯಪ್ರವೇಶಿಸಿದ್ದಾನೆ.
ಇದರಿಂದ ತೀವ್ರ ಕೋಪಗೊಂಡ ನಂಜೇಗೌಡ, ಪತ್ನಿ ರಂಜಿತಾ ಅವರನ್ನು ಮನೆಯಿಂದ ಹೊರಕ್ಕೆ ತಳ್ಳಿ ಒಳಗಿನಿಂದ ಬಾಗಿಲು ಹಾಕಿಕೊಂಡಿದ್ದಾನೆ. ಬಳಿಕ ಮನೆಯಲ್ಲಿದ್ದ ಕಬ್ಬಿಣದ ಹಾರೆಕೋಲಿನಿಂದ ಮಗ ಸುನೀಲ್ ಮೇಲೆ ಮನಸೋಇಚ್ಛೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ತೀವ್ರ ರಕ್ತಸ್ರಾವವಾಗಿ ಗಂಭೀರ ಗಾಯಗೊಂಡ ಸುನೀಲ್ ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾನೆ.
ಪೊಲೀಸ್ ಭೇಟಿ, ಆರೋಪಿ ಬಂಧನ:
ವಿಷಯ ತಿಳಿಯುತ್ತಿದ್ದಂತೆ ಕುಣಿಗಲ್ ಸಿಪಿಐ ಮಾಧ್ಯನಾಯಕ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಕೃತ್ಯ ಎಸಗಿದ ಆರೋಪಿ ನಂಜೇಗೌಡನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.