ಚಿಕ್ಕಮಗಳೂರು: ಜಿಲ್ಲೆಯ ಬಿಳೆಕಲ್ಲು ಗ್ರಾಮದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಮೆರವಣಿಗೆಯ ವೇಳೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಏಳು ವರ್ಷದ ಬಾಲಕಿಯೊಬ್ಬಳು ಸ್ಥಳದಲ್ಲೇ ಮೃತಪಟ್ಟಿದ್ದು, 9 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಸಂಭ್ರಮದ ನಡುವೆ ಸುನಾಮಿಯಂತೆ ಬಂದ ಕಾರು:
ಚಿಕ್ಕಮಗಳೂರು ತಾಲೂಕಿನ ಬಿಳೆಕಲ್ಲು ಗ್ರಾಮದಲ್ಲಿ ಮಂಗಳವಾರ ಅಂಬೇಡ್ಕರ್ ಜಯಂತಿ ಪ್ರಯುಕ್ತ ಅದ್ದೂರಿ ಮೆರವಣಿಗೆ ಸಾಗುತ್ತಿತ್ತು. ಈ ವೇಳೆ ಅತಿ ವೇಗವಾಗಿ ಬಂದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ನೇರವಾಗಿ ಮೆರವಣಿಗೆಯಲ್ಲಿದ್ದ ಜನರ ಗುಂಪಿಗೆ ನುಗ್ಗಿ ಪಲ್ಟಿಯಾಗಿದೆ. ಇಂದಾವರ ಗ್ರಾಮದಿಂದ ಸಂಬಂಧಿಕರ ಮನೆಗೆ ಬಂದಿದ್ದ ಸಾನ್ವಿ (7) ಎಂಬ ಬಾಲಕಿ ಕಾರಿನ ರಭಸಕ್ಕೆ ಸಿಲುಕಿ ದಾರುಣವಾಗಿ ಮೃತಪಟ್ಟಿದ್ದಾಳೆ.
ಅಪಘಾತದಲ್ಲಿ ನಿಶ್ಚಿತ (11), ತೃಪ್ತಿ (11), ತಿಮ್ಮರಾಜು (45), ಉಷಾ (22), ಸೃಷ್ಟಿ (18), ನಾಗರಾಜು (28), ಚೇತನ್ (16) ಸೇರಿದಂತೆ ಒಟ್ಟು ಒಂಬತ್ತು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಎಂಟು ಜನರನ್ನು ಹಾಸನದ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಕಾರು ಚಾಲಕ ಸುಧಾಕರ್ ಎಂಬುವವರಿಗೂ ಗಾಯಗಳಾಗಿದ್ದು, ಅವರ ಸ್ಥಿತಿಯೂ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.
ಘಟನೆ ಸಂಭವಿಸುತ್ತಿದ್ದಂತೆ ರೊಚ್ಚಿಗೆದ್ದ ನೂರಾರು ಗ್ರಾಮಸ್ಥರು ಚಿಕ್ಕಮಗಳೂರಿನ ಮಲ್ಲೇಗೌಡ ಸರ್ಕಾರಿ ಆಸ್ಪತ್ರೆಯ ಮುಂದೆ ಜಮಾಯಿಸಿದರು. ಗಾಯಾಳು ಚಾಲಕನನ್ನು ಹಾಸನಕ್ಕೆ ಕರೆದೊಯ್ಯುತ್ತಿದ್ದ ಆಂಬ್ಯುಲೆನ್ಸ್ ಅನ್ನು ತಡೆದ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಆಸ್ಪತ್ರೆ ಆವರಣದಲ್ಲಿ ಕೆಲಕಾಲ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ನಂತರ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾರಿನ ಅತಿ ವೇಗವೇ ಅಪಘಾತಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಮೆರವಣಿಗೆಗಳ ವೇಳೆ ಸುರಕ್ಷತಾ ಕ್ರಮಗಳ ಕೊರತೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ಈಗ ಚರ್ಚೆಗಳು ಶುರುವಾಗಿವೆ.
ಸಂಭ್ರಮದ ದಿನವೇ ಬಾಲಕಿಯ ಸಾವು ಸಂಭವಿಸಿರುವುದು ಇಡೀ ಗ್ರಾಮದಲ್ಲಿ ಶೋಕದ ಛಾಯೆ ಆವರಿಸುವಂತೆ ಮಾಡಿದೆ.