ಅಮೆರಿಕದ ಸಂಸತ್ತಿನ (ಯು.ಎಸ್. ಕಾಂಗ್ರೆಸ್) ಇತಿಹಾಸದಲ್ಲಿ ಕರ್ನಾಟಕದ ನಾಯಕ, ಡಾ. ಯು. ಟಿ. ಖಾದರ್ ಫರೀದ್ ಅವರು ತಮ್ಮ ಹೆಸರನ್ನು ಸುವರ್ಣ ಅಕ್ಷರಗಳಲ್ಲಿ ದಾಖಲಿಸುವ ಮೂಲಕ ಜಾಗತಿಕ ಮಟ್ಟದಲ್ಲಿ ಅಪರೂಪದ ಗೌರವಕ್ಕೆ ಪಾತ್ರರಾಗಿದ್ದಾರೆ. ಅವರ ಸಾರ್ವಜನಿಕ ಸೇವೆ ಹಾಗೂ ದೂರದೃಷ್ಟಿಯ ನಾಯಕತ್ವದ ಸಾಧನೆಗಳನ್ನು ಗುರುತಿಸಿ, ಅಮೆರಿಕ ಸಂಸತ್ತಿನ ಪ್ರತಿಷ್ಠಿತ “ಫಾರ್ ದಿ ಕಾಂಗ್ರೆಸ್ಸಿನಲ್ ರೆಕಾರ್ಡ್” (For the Congressional Record) ದಾಖಲೆಯನ್ನು ಗೌರವಪೂರ್ವಕವಾಗಿ ಪ್ರದಾನ ಮಾಡಲಾಗಿದೆ.
ಅಮೆರಿಕದ ಹೌಸ್ ಫಾರಿನ್ ಅಫೇರ್ಸ್ ಸಮಿತಿಯ ರ್ಯಾಂಕಿಂಗ್ ಸದಸ್ಯ, ಪ್ರಸಿದ್ಧ ನಾಗರಿಕ ಹಕ್ಕುಗಳ ಹೋರಾಟಗಾರ ರೆವರೆಂಡ್ ಜೆಸ್ಸಿ ಜಾಕ್ಸನ್ ಅವರ ಪುತ್ರ ಹಾಗೂ ಅಮೆರಿಕ ರಾಜಕೀಯದಲ್ಲಿ ‘ಭವಿಷ್ಯದ ಬರಾಕ್ ಒಬಾಮಾ’ ಎಂದೇ ವಿಶ್ಲೇಷಿಸಲ್ಪಡುವ ಸಂಸದ ಜೊನಾಥನ್ ಜಾಕ್ಸನ್ ಅವರು ಈ ಐತಿಹಾಸಿಕ ಬಹುಮಾನವನ್ನು ಪ್ರದಾನ ಮಾಡಿದರು.
ಡಾ. ಯು. ಟಿ. ಖಾದರ್ ಅವರ ಸಾಧನೆಗಳನ್ನು ಒಳಗೊಂಡ ಈ ಅಧಿಕೃತ ದಾಖಲೆಯನ್ನು ಅಮೆರಿಕ ಸಂಸತ್ತಿನ ಆರ್ಕೈವ್ಸ್‌ನಲ್ಲಿ ಸೇರ್ಪಡೆಗೊಳಿಸಲಾಗಿದ್ದು, ಯು.ಎಸ್. ಸಂಸತ್ತಿನ ಗ್ರಂಥಾಲಯದಲ್ಲಿ (Library of Congress) ಶಾಶ್ವತವಾಗಿ ಸಂರಕ್ಷಿಸಲಾಗುತ್ತದೆ.
ಇದರೊಂದಿಗೆ, ಜುಲೈ 28ರಂದು ವಾಷಿಂಗ್ಟನ್ ಡಿ.ಸಿ.ಯ ಕ್ಯಾಪಿಟಲ್ ಹಿಲ್‌ನಲ್ಲಿರುವ ಸೆಂಟ್ರಲ್ ರೋಟುಂಡಾದಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಡಾ. ಯು. ಟಿ. ಖಾದರ್ ಅವರಿಗೆ ಅತ್ಯುನ್ನತ “ಕಾಂಗ್ರೆಸ್ಸಿನಲ್ ಚಾಲೆಂಜ್ ಮೆಡಲಿಯನ್” ನೀಡಿ ಗೌರವಿಸಲಾಯಿತು.
ಈ ಐತಿಹಾಸಿಕ ಹಾಗೂ ಹೆಮ್ಮೆಯ ಕ್ಷಣಕ್ಕೆ ಸಂಸದ ಜೊನಾಥನ್ ಜಾಕ್ಸನ್ ಅವರ ಹಿರಿಯ ಸಲಹೆಗಾರ ಡಾ. ವಿಜಯ್ ಜಿ. ಪ್ರಭಾಕರ್ ಹಾಗೂ AMEC USA ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ನವೀನ್‌ಚಂದ್ರ ಕರ್ಣ ಅವರು ಉಪಸ್ಥಿತರಿದ್ದು ಸಾಕ್ಷಿಯಾದರು.
ಅಮೆರಿಕದ ಅತ್ಯುನ್ನತ ವೇದಿಕೆಯಲ್ಲಿ ಕರ್ನಾಟಕದ ನಾಯಕರೊಬ್ಬರ ಸಾರ್ವಜನಿಕ ಸೇವೆ ಅಧಿಕೃತವಾಗಿ ದಾಖಲಾಗಿರುವುದು ರಾಜ್ಯಕ್ಕೆ ಹಾಗೂ ದೇಶಕ್ಕೆ ಸಂದ ದೊಡ್ಡ ಗೌರವವಾಗಿದೆ.