Skip to main content

Police Roundup

ಸರ್ಕಾರಿ ಗೋದಾಮಿನಿಂದ 86.65 ಲಕ್ಷ ಮೌಲ್ಯದ ಆಹಾರ ಧಾನ್ಯ ಅಕ್ರಮ ಸಾಗಣೆ: ದಾಸ್ತಾನು ವ್ಯವಸ್ಥಾಪಕ ಸೇರಿ ಐವರ ವಿರುದ್ಧ ಕೇಸ್!

Share News

ಆನೇಕಲ್: ಸರ್ಕಾರಿ ಗೋದಾಮಿನಲ್ಲಿ ಬಡವರಿಗಾಗಿ ಸಂಗ್ರಹಿಸಿಟ್ಟಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಅಕ್ಕಿ, ಗೋಧಿ ಹಾಗೂ ರಾಗಿಯನ್ನು ಅಕ್ರಮವಾಗಿ ಹೊರಗೆ ಸಾಗಿಸಿ ಕಾಳಸಂತೆಯಲ್ಲಿ ಮಾರಾಟ ಮಾಡಿರುವ ಭಾರಿ ಹಗರಣ ಆನೇಕಲ್‌ ತಾಲ್ಲೂಕಿನ ರಾಮಕೃಷ್ಣಾಪುರದಲ್ಲಿ ಬೆಳಕಿಗೆ ಬಂದಿದೆ.

 

​ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ (KFCSC) ಗೋದಾಮಿನಲ್ಲಿ ಈ ಬೃಹತ್ ಅಕ್ರಮ ನಡೆದಿದ್ದು, ಸುಮಾರು 86.65 ಲಕ್ಷ ರೂ. ಮೌಲ್ಯದ ಭಾರಿ ಪ್ರಮಾಣದ ಆಹಾರ ಧಾನ್ಯ ನಾಪತ್ತೆಯಾಗಿದೆ.

 

​ಐವರ ವಿರುದ್ಧ ಎಫ್‌ಐಆರ್:

ಪ್ರಕರಣಕ್ಕೆ ಸಂಬಂಧಿಸಿದಂತೆ ಗೋದಾಮಿನ ದಾಸ್ತಾನು ವ್ಯವಸ್ಥಾಪಕ ಶಿವಕುಮಾರ್ ಹಾಗೂ ಸಿಬ್ಬಂದಿಗಳಾದ ನಾರಾಯಣಸ್ವಾಮಿ, ತಿಮ್ಮರಾಜು, ರಾಜಕುಮಾರ್ ಮತ್ತು ತೌಸಿಕ್ ಎಂಬ ಐವರ ವಿರುದ್ಧ ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿದೆ.

 

​ಬೀಗ ಜಡಿದ್ದ ಗೋದಾಮು – ಶಂಕೆಯಿಂದ ಸಿಕ್ಕಿಬಿದ್ದ ಅಕ್ರಮ:

ರಾಮಕೃಷ್ಣಾಪುರದಲ್ಲಿರುವ ಸರ್ಕಾರಿ ಗೋದಾಮು ಸತತ ಮೂರು ದಿನಗಳ ಕಾಲ ತೆರೆಯದೇ ಬಾಗಿಲು ಮುಚ್ಚಿರುವುದು ಅನುಮಾನಕ್ಕೆ ಕಾರಣವಾಗಿತ್ತು. ಇದನ್ನು ಗಮನಿಸಿದ ಆಹಾರ ಶಿರಸ್ತೇದಾರರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಬೀಗ ಹಾಕಿರುವುದು ಕಂಡುಬಂದಿದೆ. ತಕ್ಷಣವೇ ಅವರು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಅಧಿಕಾರಿಗಳ ತಂಡ ಗೋದಾಮಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

 

​ದಾಸ್ತಾನು ಪರಿಶೀಲನೆಯಲ್ಲಿ ಭಾರಿ ವ್ಯತ್ಯಾಸ:

ಉನ್ನತಾಧಿಕಾರಿಗಳು ಗೋದಾಮಿನ ದಾಸ್ತಾನು ರಿಜಿಸ್ಟರ್ ಮತ್ತು ಭೌತಿಕ ದಾಸ್ತಾನನ್ನು ಪರಿಶೀಲಿಸಿದಾಗ ನೂರಾರು ಕ್ವಿಂಟಲ್ ಅಕ್ಕಿ, ಗೋಧಿ ಹಾಗೂ ರಾಗಿ ನಾಪತ್ತೆಯಾಗಿರುವುದು ದೃಢಪಟ್ಟಿದೆ. ಪ್ರಾಥಮಿಕ ತನಿಖೆಯಲ್ಲಿ ಒಟ್ಟು 86.65 ಲಕ್ಷ ರೂ. ಮೌಲ್ಯದ ಸರ್ಕಾರಿ ದಾಸ್ತಾನು ದುರ್ಬಳಕೆಯಾಗಿರುವುದು ಬೆಳಕಿಗೆ ಬಂದಿದೆ. ಅಧಿಕಾರಿಗಳು ಮತ್ತು ಸಿಬ್ಬಂದಿ ಸೇರಿಕೊಂಡೇ ಈ ಧಾನ್ಯವನ್ನು ಅಕ್ರಮವಾಗಿ ಹೊರಗೆ ಸಾಗಿಸಿ ಮಾರಾಟ ಮಾಡಿದ್ದಾರೆ ಎಂದು ಶಂಕಿಸಲಾಗಿದೆ.

 

​ಆರೋಪಿಗಳು ಎಸ್ಕೇಪ್ – ಪೊಲೀಸರ ಬಲೆ:

ಪ್ರಕರಣ ದಾಖಲಾಗುತ್ತಿದ್ದಂತೆಯೇ ಆರೋಪಿತ ಗೋದಾಮು ವ್ಯವಸ್ಥಾಪಕ ಹಾಗೂ ಸಿಬ್ಬಂದಿ ತಲೆಮರೆಸಿಕೊಂಡಿದ್ದಾರೆ. ಸೂರ್ಯನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಗೋದಾಮಿನ ದಾಖಲೆಗಳು, ಸಿಸಿಟಿವಿ ದೃಶ್ಯಾವಳಿಗಳು ಹಾಗೂ ಧಾನ್ಯ ಸಾಗಾಟಕ್ಕೆ ಬಳಸಿದ ವಾಹನಗಳ ಕುರಿತು ಸಮಗ್ರ ತನಿಖೆ ಕೈಗೊಂಡಿದ್ದು, ನಾಪತ್ತೆಯಾಗಿರುವ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

 


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin