Skip to main content

Police Roundup

ಮಹಿಳಾ ಕಾರಾಗೃಹಕ್ಕೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಭೇಟಿ: ಜೈಲೂಟ ಸವಿದು ಕೈದಿಗಳ ಅಳಲು ಆಲಿಸಿದ ನಾಗಲಕ್ಷ್ಮೀ ಚೌಧರಿ

Share News

ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ಮಹಿಳಾ ಕಾರಾಗೃಹಕ್ಕೆ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಅವರು ದಿಢೀರ್ ಭೇಟಿ ನೀಡಿ ಸುದೀರ್ಘ ಪರಿಶೀಲನೆ ನಡೆಸಿದರು. ಮಹಿಳಾ ಬ್ಯಾರಕ್‌ಗಳಿಗೆ ಭೇಟಿ ನೀಡಿದ ಅವರು, ಜೈಲಿನಲ್ಲಿರುವ ಮಹಿಳಾ ಕೈದಿಗಳಿಗೆ ಸಿಗುತ್ತಿರುವ ಮೂಲಭೂತ ಸೌಲಭ್ಯಗಳು, ಮಕ್ಕಳ ವಿದ್ಯಾಭ್ಯಾಸ, ಆಹಾರದ ಗುಣಮಟ್ಟ ಹಾಗೂ ಕಾನೂನು ನೆರವಿನ ಕುರಿತು ವಿವರವಾದ ಮಾಹಿತಿ ಕಲೆಹಾಕಿದರು.

 

​ಜೈಲೂಟದ ಗುಣಮಟ್ಟ ಪರಿಶೀಲನೆ

ಕಾರಾಗೃಹದಲ್ಲಿದ್ದ ೨೦೦ಕ್ಕೂ ಅಧಿಕ ಮಹಿಳಾ ಕೈದಿಗಳ ಸ್ಥಿತಿಗತಿ ಪರಿಶೀಲಿಸಿದ ಅಧ್ಯಕ್ಷರು, ಕೈದಿಗಳಿಗೆ ನೀಡಲಾಗುತ್ತಿರುವ ಆಹಾರದ ಗುಣಮಟ್ಟವನ್ನು ಸ್ವತಃ ಊಟ ಮಾಡುವ ಮೂಲಕ ಪರೀಕ್ಷಿಸಿದರು. ಅಲ್ಲದೆ, ಎಷ್ಟು ಮಂದಿ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾರೆ ಹಾಗೂ ಮಹಿಳಾ ಕೈದಿಗಳಿಗೆ ಸಿಗುತ್ತಿರುವ ಪಬ್ಲಿಕ್ ಪ್ರಾಸಿಕ್ಯೂಟರ್‌ಗಳ ವ್ಯವಸ್ಥೆ ಮತ್ತು ಕಾನೂನು ನೆರವಿನ ಬಗ್ಗೆಯೂ ತಪಾಸಣೆ ನಡೆಸಿದರು. ಇಂದು ಆರು ಮಂದಿ ಮಹಿಳೆಯರು ಜೈಲಿನಿಂದ ಬಿಡುಗಡೆಯಾಗಿದ್ದಾರೆ ಎಂದು ಅವರು ತಿಳಿಸಿದರು.

 

​ಜಾಮೀನು ಸಿಕ್ಕರೂ ಶ್ಯೂರಿಟಿ ಇಲ್ಲದೆ ಸಂಕಷ್ಟ!

ಕೋರ್ಟ್‌ನಿಂದ ಜಾಮೀನು ಮಂಜೂರಾಗಿದ್ದರೂ, ದಂಡ ಅಥವಾ ಶ್ಯೂರಿಟಿ ಹಣ ಕಟ್ಟಲು ಸಾಧ್ಯವಾಗದೆ ಹಲವು ಮಹಿಳಾ ಕೈದಿಗಳು ಜೈಲಿನಲ್ಲೇ ಉಳಿಯುವಂತಾಗಿದೆ. ಈ ಆರ್ಥಿಕ ಸಂಕಷ್ಟದ ಶ್ಯೂರಿಟಿ ಸಮಸ್ಯೆಯ ಬಗ್ಗೆ ಶೀಘ್ರದಲ್ಲೇ ಗೃಹ ಸಚಿವರೊಂದಿಗೆ ಮಾತುಕತೆ ನಡೆಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

 

​ಕನ್ನಡ-ಇಂಗ್ಲಿಷ್ ಹಾಡುವ ವಿದೇಶಿ ಮಕ್ಕಳು!

ಮಹಿಳಾ ಕೈದಿಗಳೊಂದಿಗೆ ೮ ರಿಂದ ೧೦ ಪುಟ್ಟ ಮಕ್ಕಳಿದ್ದು, ಅವರಿಗಾಗಿ ಜೈಲಿನೊಳಗೆ ಶಾಲಾ ವ್ಯವಸ್ಥೆ ಮಾಡಲಾಗಿದೆ. ಮೂವರು ಶಿಕ್ಷಕರು ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ದಕ್ಷಿಣ ಆಫ್ರಿಕಾ ಹಾಗೂ ನೈಜೀರಿಯಾ ದೇಶಗಳ ಮಕ್ಕಳು ಕೂಡ ಇಲ್ಲಿ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಮಾತನಾಡುವುದಲ್ಲದೆ, ಕನ್ನಡ ಹಾಡುಗಳನ್ನು ಹಾಡುತ್ತಿರುವುದು ವಿಶೇಷವಾಗಿ ಕಂಡುಬಂತು. ನಿಯಮಾವಳಿಗಳ ಪ್ರಕಾರ, ಆರು ವರ್ಷದೊಳಗಿನ ಮಕ್ಕಳಿಗೆ ತಾಯಿಯೊಂದಿಗಿರಲು ಅವಕಾಶ ಕಲ್ಪಿಸಲಾಗಿದೆ.

 

​ಸೊಳ್ಳೆ ಕಾಟ ಮತ್ತು ಪವಿತ್ರಾಗೌಡ ವಿಚಾರ

ರಾತ್ರಿ ವೇಳೆಯಲ್ಲಿ ತೀವ್ರ ಸೊಳ್ಳೆ ಕಾಟದಿಂದ ತೊಂದರೆಯಾಗುತ್ತಿದೆ ಎಂದು ಮಹಿಳಾ ಕೈದಿಗಳು ತಮ್ಮ ಅಳಲನ್ನು ತೋಡಿಕೊಂಡಿದ್ದು, ಈ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು. ಇನ್ನು ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ಪವಿತ್ರಾಗೌಡ ವಿಚಾರವಾಗಿ ಮಾತನಾಡಿದ ಅವರು, “ಪವಿತ್ರಾಗೌಡ ಜೈಲಿನ ವಾತಾವರಣದಿಂದ ಮಾನಸಿಕವಾಗಿ ಕುಗ್ಗಿದ್ದಾರೆ. ನಮಗೆ ಎಲ್ಲ ಕೈದಿಗಳೂ ಒಂದೇ. ಪದೇ ಪದೇ ಅವರ ಬಗ್ಗೆ ಮಾತನಾಡಿದರೆ ಅವರು ಇನ್ನಷ್ಟು ಮಾನಸಿಕ ತೊಂದರೆಗೆ ಒಳಗಾಗುತ್ತಾರೆ. ನಿಯಮಗಳು ಎಲ್ಲರಿಗೂ ಸಮಾನವಾಗಿರಬೇಕು” ಎಂದು ಹೇಳಿದರು.

 


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin