Skip to main content

Police Roundup

ಇನ್‌ಸ್ಟಾಗ್ರಾಮ್ ಪ್ರೀತಿ, ಮೂರೇ ತಿಂಗಳಿಗೆ ದುರಂತ ಅಂತ್ಯ – ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಶಿಕ್ಷಕಿ ಆತ್ಮಹತ್ಯೆ; ಪತಿ ಪೊಲೀಸ್ ವಶಕ್ಕೆ

Share News

ಬೆಂಗಳೂರು: ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾಗಿ, ಹೆತ್ತವರ ವಿರೋಧ ಕಟ್ಟಿ ಕೊಂಡು ಪ್ರೀತಿಸಿ ಮದುವೆಯಾಗಿದ್ದ ಯುವತಿಯೊಬ್ಬಳು ಕೇವಲ ಮೂರೇ ತಿಂಗಳಲ್ಲಿ ಪತಿ ಹಾಗೂ ಆತನ ಅಕ್ಕನ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ನೇಣಿಗೆ ಶರಣಾಗಿರುವ ದಾರುಣ ಘಟನೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಸುಂಕದಕಟ್ಟೆಯ ಲಕ್ಷ್ಮಣ್ ನಗರದಲ್ಲಿ ನಡೆದಿದೆ.

 

​ಶಿವಮೊಗ್ಗ ಮೂಲದ ಶ್ವೇತಾ (25) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಘಟನೆಗೆ ಸಂಬಂಧಿಸಿದಂತೆ ಕಾಮಾಕ್ಷಿಪಾಳ್ಯ ಪೊಲೀಸರು ಪತಿ ಮೂರ್ತಿಯನ್ನು ರಾತ್ರಿಯೇ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

 

ಮೃತ ಶ್ವೇತಾ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದರು. ಇವರಿಗೆ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್ (Instagram) ಮೂಲಕ ತುಮಕೂರು ಜಿಲ್ಲೆ ಕುಣಿಗಲ್ ಮೂಲದ ಮೂರ್ತಿ ಎಂಬಾತನ ಪರಿಚಯವಾಗಿತ್ತು. ಪರಿಚಯ ಪ್ರೀತಿಯಾಗಿ ಬದಲಾಗಿದ್ದು, ಹೆತ್ತವರ ವಿರೋಧದ ನಡುವೆಯೂ ಇಬ್ಬರು ಇತ್ತೀಚೆಗೆ ಕಮಲನಗರದ ದೇವಸ್ಥಾನದಲ್ಲಿ ಮದುವೆಯಾಗಿದ್ದರು. ಮದುವೆಯ ನಂತರ ಹೆಗ್ಗನಹಳ್ಳಿ ಕ್ರಾಸ್ ಬಳಿಯ ಲಕ್ಷ್ಮಣ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು.

 

ಮದುವೆಯಾದ ದಿನದಿಂದಲೇ ಶ್ವೇತಾಗೆ ಪತಿಯ ಅಸಲಿ ಮುಖದ ದರ್ಶನವಾಗಿತ್ತು. ಪತಿ ಮೂರ್ತಿ ಹಾಗೂ ಆತನ ಅಕ್ಕ ಸೇರಿ ಶ್ವೇತಾಗೆ ನಿರಂತರವಾಗಿ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. “ನಿಮ್ಮ ಅಕ್ಕಂದಿರಿಗೆ ಅದ್ಧೂರಿಯಾಗಿ ಮದುವೆ ಮಾಡಿದ್ದಾರೆ, ನೀನೂ ಸಹ ನಿಮ್ಮ ಮನೆಯವರಿಂದ ಹಣ, ಒಡವೆ ಇಸ್ಕೊಂಡು ಬಾ” ಎಂದು ವರದಕ್ಷಿಣೆಗಾಗಿ ಪತಿ ದಿನವೂ ಶ್ವೇತಾಳ ಮೇಲೆ ಹಲ್ಲೆ ನಡೆಸುತ್ತಿದ್ದ ಎನ್ನಲಾಗಿದೆ.

 

ಭಾನುವಾರವೂ ಸಹ ಇಬ್ಬರ ನಡುವೆ ಇದೇ ವಿಚಾರವಾಗಿ ಜೋರಾಗಿ ಗಲಾಟೆಯಾಗಿದ್ದು, ಇದರಿಂದ ತೀವ್ರ ಮನನೊಂದ ಶ್ವೇತಾ ಮನೆಯ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೂ ಮುನ್ನ ಶ್ವೇತಾ ಡೆತ್ ನೋಟ್ ಬರೆದಿಟ್ಟಿದ್ದು, ಅದರಲ್ಲಿ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.

 

“ನನ್ನ ಸಾವಿಗೆ ನನ್ನ ಗಂಡ ಮತ್ತು ಗಂಡನ ಅಕ್ಕನೇ ಕಾರಣ. ಅವರಿಂದ ನನಗೆ ಬದುಕೋಕೆ ಆಸೆಯೇ ಇಲ್ಲದಂತೆ ಆಗಿದೆ. ಅಮ್ಮ ನನ್ನಿಂದ ತಪ್ಪಾಯಿತು ಕ್ಷಮಿಸಿಬಿಡು, ನಾನು ಸತ್ತರೆ ಅವರನ್ನು ಮಾತ್ರ ಸುಮ್ಮನೆ ಬಿಡಬೇಡಿ” ಎಂದು ಶ್ವೇತಾ ಪತ್ರದಲ್ಲಿ ಬರೆದಿದ್ದಾರೆ.

 

​ಪ್ರೀತಿಯ ಜಾಲಕ್ಕೆ ಬಿದ್ದು, ಹೆತ್ತವರನ್ನು ಎದುರುಹಾಕಿಕೊಂಡು ಬಂದ ಯುವತಿ ಕೇವಲ ಮೂರೇ ತಿಂಗಳಲ್ಲಿ ಪತಿಯ ಕ್ರೌರ್ಯಕ್ಕೆ ಬಲಿಯಾಗಿರುವುದು ಹೆತ್ತವರಿಗೆ ಹಾಗೂ ಕುಟುಂಬಸ್ಥರಿಗೆ ತಡೆಯಲಾಗದ ಆಘಾತವನ್ನು ಉಂಟುಮಾಡಿದೆ. ಕಾಮಾಕ್ಷಿಪಾಳ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

 


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin