ಬೆಂಗಳೂರು: ಕೌಟುಂಬಿಕ ಜಗಳದ ಹಿನ್ನೆಲೆಯಲ್ಲಿ ಪತಿಯೊಬ್ಬ ತನ್ನ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿ, ತಾನೂ ಸಹ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಭೀಕರ ಘಟನೆ ಸಿ.ಕೆ. ಅಚ್ಚುಕಟ್ಟು (ಚನ್ನಮ್ಮನಕೆರೆ ಅಚ್ಚುಕಟ್ಟು) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೃತರನ್ನು ಅಸ್ಸಾಂ ಮೂಲದ ದಂಪತಿಗಳಾದ ಸ್ವಪ್ನ (28) ಮತ್ತು ಮನೋಜ್ (28) ಎಂದು ಗುರುತಿಸಲಾಗಿದೆ. ಈ ದಂಪತಿಗೆ ಮೂರು ವರ್ಷಗಳ ಹಿಂದೆಯಷ್ಟೇ ಮದುವೆಯಾಗಿತ್ತು. ಪತಿ ಮನೋಜ್ ಬೆಂಗಳೂರಿನಲ್ಲಿ ಕಾರ್ಪೆಂಟರ್ (ಬಡಗಿ) ಕೆಲಸ ಮಾಡಿಕೊಂಡಿದ್ದನು ಎಂದು ತಿಳಿದುಬಂದಿದೆ.
ಕಳೆದ ಕೆಲವು ದಿನಗಳಿಂದ ದಂಪತಿಗಳ ನಡುವೆ ತೀವ್ರ ಸ್ವರೂಪದ ಕೌಟುಂಬಿಕ ಕಲಹ ನಡೆಯುತ್ತಿತ್ತು ಎನ್ನಲಾಗಿದೆ. ಇದೇ ಜಗಳ ವಿಕೋಪಕ್ಕೆ ತಿರುಗಿ, ಮನೋಜ್ ತನ್ನ ಪತ್ನಿ ಸ್ವಪ್ನಳ ಕತ್ತು ಹಿಸುಕಿ ಮನೆಯಲ್ಲೇ ಕೊಲೆ ಮಾಡಿದ್ದಾನೆ. ಪತ್ನಿ ಮೃತಪಡುತ್ತಿದ್ದಂತೆ ಆತಂಕಗೊಂಡ ಮನೋಜ್, ಅದೇ ಮನೆಯಲ್ಲಿ ತಾನೂ ಸಹ ನೇಣಿಗೆ ಶರಣಾಗಿದ್ದಾನೆ.
ಮನೆಯಲ್ಲಿ ಯಾವುದೇ ಸದ್ದು-ಗದ್ದಲವಿಲ್ಲದೆ ಅನುಮಾನಾಸ್ಪದ ವಾತಾವರಣ ಕಂಡುಬಂದ ಹಿನ್ನೆಲೆಯಲ್ಲಿ ಮನೆ ಮಾಲೀಕರು ತಕ್ಷಣವೇ ಸಿ.ಕೆ. ಅಚ್ಚುಕಟ್ಟು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಬಾಗಿಲು ತೆರೆದು ಪರಿಶೀಲಿಸಿದಾಗ ದಂಪತಿಗಳಿಬ್ಬರೂ ಶವವಾಗಿ ಪತ್ತೆಯಾಗಿದ್ದಾರೆ.
”ಸಿ.ಕೆ. ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಮನೆ ಮಾಲೀಕರು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಗಂಡ-ಹೆಂಡತಿ ನಡುವಿನ ಜಗಳವೇ ಇದಕ್ಕೆ ಕಾರಣ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಎಫ್.ಎಸ್.ಎಲ್ ಹಾಗೂ ಸಾಕೋ (FSL & FSL-SOCO) ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಟನೆಗೆ ನಿಖರ ಕಾರಣ ಏನೆಂಬುದರ ಕುರಿತು ತನಿಖೆ ಮುಂದುವರಿದಿದೆ.”
— ಕೆ. ವಂಶಿಕೃಷ್ಣ, ಡಿಸಿಪಿ (ದಕ್ಷಿಣ ವಿಭಾಗ), ಬೆಂಗಳೂರು
ಘಟನಾ ಸ್ಥಳಕ್ಕೆ ಸಿ.ಕೆ. ಅಚ್ಚುಕಟ್ಟು ಠಾಣೆಯ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಮಹಜರು ನಡೆಸಿದ್ದಾರೆ. ಸದ್ಯ ಶವಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.