ಬೆಂಗಳೂರು: ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ನಾಗಲಕ್ಷ್ಮಿ ಚೌಧರಿ ಅವರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ದಿಢೀರ್ ಭೇಟಿ ನೀಡಿ, ಮಹಿಳಾ ಕೈದಿಗಳೊಂದಿಗೆ ನೇರ ಸಂವಾದ ನಡೆಸಿ ಅವರ ಸಮಸ್ಯೆ ಹಾಗೂ ಕುಂದುಕೊರತೆಗಳನ್ನು ಆಲಿಸಿದರು.
ಕಾರಾಗೃಹದ ಅಡುಗೆಮನೆ, ಆಹಾರದ ಗುಣಮಟ್ಟ, ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ, ವೈದ್ಯಕೀಯ ಹಾಗೂ ಮನೋವೈದ್ಯಕೀಯ ಸೇವೆಗಳು ಮತ್ತು ಮಕ್ಕಳ ಆರೈಕೆ ಕೇಂದ್ರ ಸೇರಿದಂತೆ ಪ್ರಮುಖ ಮೂಲಭೂತ ಸೌಲಭ್ಯಗಳನ್ನು ಅವರು ಖುದ್ದಾಗಿ ಪರಿಶೀಲಿಸಿದರು. ಇದೇ ವೇಳೆ ಕಾರಾಗೃಹದಲ್ಲಿರುವ ಶಾಲೆ ಹಾಗೂ ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರಗಳಿಗೆ ಭೇಟಿ ನೀಡಿ, ಮಹಿಳೆಯರು ಮತ್ತು ಮಕ್ಕಳಿಗೆ ದೊರೆಯುತ್ತಿರುವ ಶಿಕ್ಷಣ ಹಾಗೂ ತರಬೇತಿಯ ಪ್ರಗತಿ ಪರಿಶೀಲಿಸಿದರು.
ಜಾಮೀನು ಪಡೆದ ಕೈದಿಗಳ ಬಿಡುಗಡೆಗೆ ಕ್ರಮ:
ನ್ಯಾಯಾಲಯದಿಂದ ಜಾಮೀನು ದೊರೆತಿದ್ದರೂ ಅಥವಾ ಶಿಕ್ಷೆಯ ಅವಧಿ ಪೂರ್ಣಗೊಂಡಿದ್ದರೂ ಸೂಕ್ತ ‘ಸುರಿಟಿ’ (ಶ್ಯೂರಿಟಿ) ಲಭ್ಯವಿಲ್ಲದೆ ದೀರ್ಘಕಾಲದಿಂದ ಜೈಲಿನಲ್ಲೇ ಉಳಿದುಕೊಂಡಿರುವ ಕೈದಿಗಳ ಸ್ಥಿತಿಯ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದರು. ವಿಶೇಷವಾಗಿ ವಿದೇಶಿ ಕೈದಿಗಳ ಕಾನೂನುಬದ್ಧ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದ್ದು, ಈ ವಿಷಯವನ್ನು ಶೀಘ್ರವೇ ಸರ್ಕಾರದ ಗಮನಕ್ಕೆ ತರುವುದಾಗಿ ತಿಳಿಸಿದರು.
ಪ್ರತಿಯೊಬ್ಬ ಮಹಿಳೆಯ ಮೂಲಭೂತ ಹಕ್ಕುಗಳು, ಮಾನವೀಯ ಗೌರವ ಮತ್ತು ಸುರಕ್ಷತೆಯನ್ನು ಕಾಪಾಡುವುದು ಆಯೋಗದ ಪ್ರಮುಖ ಆದ್ಯತೆಯಾಗಿದೆ ಎಂದು ಈ ಸಂದರ್ಭದಲ್ಲಿ ಅವರು ಸ್ಪಷ್ಟಪಡಿಸಿದರು.