ಬೀದರ್: ಕರ್ನಾಟಕ ಮತ್ತು ಮಹಾರಾಷ್ಟ್ರದ ವಿವಿಧ ಜಿಲ್ಲೆಗಳಲ್ಲಿ ಕಳ್ಳತನ, ದರೋಡೆ ಹಾಗೂ ಸುಲಿಗೆಯಂತಹ 55ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಇಬ್ಬರು ಕುಖ್ಯಾತ ಅಂತರರಾಜ್ಯ ರೂಢಿಗತ ಕಳ್ಳರನ್ನು ಹುಮನಾಬಾದ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳಿಂದ ಸುಮಾರು 54,74,000 ರೂ. ಮೌಲ್ಯದ ಚಿನ್ನಾಭರಣ, ಬೆಳ್ಳಿ, ನಗದು ಹಾಗೂ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ವಶಪಡಿಸಿಕೊಂಡ ಸೊತ್ತುಗಳ ವಿವರ:
ಬಂಗಾರದ ಆಭರಣಗಳು: 28.5 ತೊಲೆ (ಅಂದಾಜು ಮೌಲ್ಯ 42,75,000 ರೂ.)
ಬೆಳ್ಳಿಯ ಆಭರಣಗಳು: 22 ತೊಲೆ (ಅಂದಾಜು ಮೌಲ್ಯ 44,000 ರೂ.)
ನಗದು ಹಣ: 5,80,000 ರೂ.
ಕೃತ್ಯಕ್ಕೆ ಬಳಸಿದ ಕಾರು: 1 (ಅಂದಾಜು ಮೌಲ್ಯ 5,75,000 ರೂ.)
ಬೀದರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಪ್ರದೀಪ್ ಗುಂಟಿ, ಐಪಿಎಸ್ ಅವರ ನಿರ್ದೇಶನ ಹಾಗೂ ಹೆಚ್.ಎ.ಎಸ್ ಚಂದ್ರಕಾಂತ ಪೂಜಾರಿ ಅವರ ಮಾರ್ಗದರ್ಶನದಲ್ಲಿ, ಹುಮನಾಬಾದ್ ಡಿವೈಎಸ್ಪಿ ಮಡೋಳಪ್ಪ ಪಿ.ಎಸ್. ನೇತೃತ್ವದ ವಿಶೇಷ ತಂಡ ಈ ಪತ್ತೆ ಕಾರ್ಯಾಚರಣೆ ನಡೆಸಿದೆ.
ಪ್ರಕರಣದ ಆರಂಭದಲ್ಲಿ ಯಾವುದೇ ಪ್ರತ್ಯಕ್ಷ ಸುಳಿವುಗಳಿಲ್ಲದಿದ್ದರೂ, ಜಿಲ್ಲೆಯಾದ್ಯಂತ ಅಳವಡಿಸಲಾದ ಎ.ಐ (AI) ಸಿ.ಸಿ.ಟಿ.ವಿ ಕ್ಯಾಮೆರಾಗಳ ದೃಶ್ಯಾವಳಿ ಹಾಗೂ ಸಿ.ಡಿ.ಆರ್ (CDR) ತಾಂತ್ರಿಕ ತಂಡ ನೀಡಿದ ವೈಜ್ಞಾನಿಕ ಮಾಹಿತಿಯನ್ನು ಆಧರಿಸಿ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.
ಪೊಲೀಸರ ತೀವ್ರ ವಿಚಾರಣೆ ವೇಳೆ, ಈ ಆರೋಪಿಗಳು ಕರ್ನಾಟಕದ ಬೆಳಗಾವಿ, ವಿಜಯಪುರ, ಕೊಪ್ಪಳ, ಕಲಬುರಗಿ, ಬೀದರ್, ಬಸವಕಲ್ಯಾಣ, ಬಳ್ಳಾರಿ, ಹೊಸಪೇಟೆ ಹಾಗೂ ಮಹಾರಾಷ್ಟ್ರದ ಸೋಲಾಪುರ, ಪುಣೆ ಮತ್ತು ತೆಲಂಗಾಣದ ಮಹಬೂಬ್ ನಗರಗಳಲ್ಲಿ ಕಳ್ಳತನ, ಸುಲಿಗೆ, ದರೋಡೆ ಮತ್ತು ಕೊಲೆಯತ್ನ ಸೇರಿದಂತೆ 55ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ.
ಯಾವುದೇ ಸುಳಿವಿರದ ಕಠಿಣ ಪ್ರಕರಣವನ್ನು ಎಐ ತಂತ್ರಜ್ಞಾನ ಹಾಗೂ ಚಾಕಚಕ್ಯತೆಯಿಂದ ಭೇದಿಸಿದ ಹುಮನಾಬಾದ್ ಸಿಪಿಐ ಸಂತೋಷ್ ಎಲ್. ತಟ್ಟೆಪಳ್ಳಿ, ಪಿಎಸ್‌ಐ ಸುರೇಶಕುಮಾರ, ವಿವಿಧ ಠಾಣೆಗಳ ಪಿಎಸ್‌ಐಗಳು, ತಾಂತ್ರಿಕ ತಂಡ ಹಾಗೂ ಸಿಬ್ಬಂದಿಯ ಕಾರ್ಯವನ್ನು ಎಸ್ಪಿ ಪ್ರದೀಪ್ ಗುಂಟಿ ಅವರು ಶ್ಲಾಘಿಸಿದ್ದಾರೆ.