ಬೀರೂರು: ಕಡೂರು ತಾಲೂಕಿನ ಬೀರೂರು ಪಟ್ಟಣದಲ್ಲಿ ನಿರ್ಮಿಸಲಾಗಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ 12 ಅಡಿ ಎತ್ತರದ ಭವ್ಯ ಕಂಚಿನ ಪ್ರತಿಮೆಯನ್ನು ಸೆಪ್ಟೆಂಬರ್ 10 ರಂದು ವೈಭವದ ಸಮಾರಂಭದಲ್ಲಿ ಲೋಕಾರ್ಪಣೆ ಮಾಡಲಾಗುವುದು.
ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅಪ್ರತಿಮ ಶೌರ್ಯ, ತ್ಯಾಗ ಮತ್ತು ದೇಶಪ್ರೇಮ ಮೆರೆದ ವೀರ ಸೇನಾನಿ ರಾಯಣ್ಣ ಅವರ ಸ್ಮರಣಾರ್ಥ ಈ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಯುವಜನತೆಯಲ್ಲಿ ದೇಶಭಕ್ತಿ ಹಾಗೂ ರಾಯಣ್ಣನವರ ಆದರ್ಶಗಳನ್ನು ಬಿತ್ತುವ ಉದ್ದೇಶದಿಂದ ಕಾರ್ಯಕ್ರಮದ ಅಂಗವಾಗಿ ಹಲವು ಸಾಂಸ್ಕೃತಿಕ ಹಾಗೂ ವೈಚಾರಿಕ ವೇದಿಕೆಗಳನ್ನು ಆಯೋಜಿಸಲಾಗಿದೆ.
ಪಟ್ಟಣದಲ್ಲಿ 12 ಅಡಿ ಎತ್ತರದ ಕಂಚಿನ ಪ್ರತಿಮೆ ತಲೆಯೆತ್ತಿರುವುದು ರಾಯಣ್ಣನ ಅಭಿಮಾನಿಗಳಲ್ಲಿ ಹಾಗೂ ಸಾರ್ವಜನಿಕರಲ್ಲಿ ಹರ್ಷ ಮೂಡಿಸಿದೆ. ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಬೀರೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಸಾರ್ವಜನಿಕರು ಮತ್ತು ಅಭಿಮಾನಿಗಳು ಆಗಮಿಸುವ ನಿರೀಕ್ಷೆಯಿದೆ.