ಚಿಕ್ಕಬಳ್ಳಾಪುರ: ಗಂಡನ ಮನೆಯಲ್ಲಿ ಕಿರುಕುಳ ಮತ್ತು ತವರು ಮನೆಯಲ್ಲಿ ಅನುಭವಿಸಿದ ಅವಮಾನದಿಂದ ಬೇಸತ್ತು ಪ್ರತ್ಯೇಕವಾಗಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಇಬ್ಬರು ಹೆಣ್ಣು ಮಕ್ಕಳ ತಾಯಿಯೊಬ್ಬರು ಅನುಮಾನಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ತಾಲೂಕಿನ ಚೊಕ್ಕನಹಳ್ಳಿಯಲ್ಲಿ ನಡೆದಿದೆ.
ಇನವಿಂಚನಹಳ್ಳಿ ಮೂಲದ ಚೈತ್ರಾ (28) ಮೃತ ದುರ್ದೈವಿ. ಘಟನಾ ಸ್ಥಳಕ್ಕೆ ನಂದಿಗಿರಿಧಾಮ ಪೊಲೀಸ್ ಠಾಣೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಘಟನೆಯ ವಿವರ:
ಮೃತ ಚೈತ್ರಾಗೆ 14 ವರ್ಷಗಳ ಹಿಂದೆ ದೇವನಹಳ್ಳಿ ತಾಲೂಕಿನ ನಲಪ್ಪನಹಳ್ಳಿಯ ವ್ಯಕ್ತಿಯೊಂದಿಗೆ ವಿವಾಹವಾಗಿತ್ತು. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಗಂಡನ ಮನೆಯಲ್ಲಿ ಅತ್ತೆಯ ಕಿರುಕುಳ ತಾಳಲಾರದೆ ಚೈತ್ರಾ ಮಕ್ಕಳೊಂದಿಗೆ ತವರು ಮನೆಗೆ ಮರಳಿದ್ದರು.
ತವರು ಮನೆಯಲ್ಲಿದ್ದಾಗ ಆಕೆಯ ಅಣ್ಣನಿಗೆ ಮದುವೆಗೆ ಹೆಣ್ಣು ಹುಡುಕುವ ಪ್ರಕ್ರಿಯೆ ನಡೆಯುತ್ತಿತ್ತು. ಈ ವೇಳೆ ಅಕ್ಕಪಕ್ಕದವರು “ನಿನ್ನಿಂದಾಗಿಯೇ ನಿನ್ನ ಅಣ್ಣನಿಗೆ ಮದುವೆಯಾಗುತ್ತಿಲ್ಲ” ಎಂದು ನಿಂದಿಸಿದ್ದರೆನ್ನಲಾಗಿದೆ. ಇದರಿಂದ ಮನನೊಂದ ಚೈತ್ರಾ, ಮಕ್ಕಳನ್ನು ಕರೆದುಕೊಂಡು ಚೊಕ್ಕನಹಳ್ಳಿಯಲ್ಲಿ ಬಾಡಿಗೆ ಮನೆ ಪಡೆದು, ದ್ರಾಕ್ಷಿ ಕಟ್ಟಿಂಗ್ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದರು.
ಕೊಲೆ ಆರೋಪ ಹಾಗೂ ಅನುಮಾನ:
ಮಂಗಳವಾರ ಬೆಳಿಗ್ಗೆ ಚೈತ್ರಾ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆಸ್ಪತ್ರೆಗೆ ದಾಖಲಿಸಿದಾಗ ಆಕೆ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ. ಆದರೆ, ಇದು ಆತ್ಮಹತ್ಯೆಯಲ್ಲ, ಕೊಲೆ ಎಂದು ಮೃತರ ಪೋಷಕರು ಆರೋಪಿಸಿದ್ದಾರೆ.
ಚೈತ್ರಾ ಕೆಲಸ ಮಾಡುತ್ತಿದ್ದ ಸ್ಥಳದಲ್ಲಿ ಪರಿಚಯವಾಗಿದ್ದ ಶಬ್ಬೀರ್ ಎಂಬಾತನೇ ಈ ಕೃತ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಘಟನೆಯ ನಂತರ ಆತನೇ ಚೈತ್ರಾ ನೇಣು ಹಾಕಿಕೊಂಡಿರುವುದಾಗಿ ಸುದ್ದಿ ತಿಳಿಸಿ, ಆಕೆಯ ಮೊಬೈಲ್ ಫೋನ್ನೊಂದಿಗೆ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಈ ಸಂಬಂಧ ನಂದಿಗಿರಿಧಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಶಬ್ಬೀರ್ಗಾಗಿ ಪೊಲೀಸರು ಶೋಧ ಕಾರ್ಯ ತೀವ್ರಗೊಳಿಸಿದ್ದಾರೆ.