ಚಿಕ್ಕೋಡಿ/ಸದಲಗಾ: ಜಾತ್ರೆಗೆ ಹೋಗುವ ಸಣ್ಣ ವಿಚಾರವಾಗಿ ಗಂಡ-ಹೆಂಡತಿ ನಡುವೆ ನಡೆದ ಜಗಳ ವಿಕೋಪಕ್ಕೆ ತಿರುಗಿ, ಮನನೊಂದ ಪತ್ನಿಯೊಬ್ಬಳು ದೂದಗಂಗಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣದಲ್ಲಿ ನಡೆದಿದೆ.
ನದಿಗೆ ಹಾರಿದ ದುರ್ಬಲ ಮನಸ್ಸಿನ ಮಹಿಳೆಯನ್ನು ಮಂಜುಳಾ ವಂಜೀರೆ (23) ಎಂದು ಗುರುತಿಸಲಾಗಿದೆ.
ಸ್ಥಳೀಯವಾಗಿ ನಡೆಯುತ್ತಿದ್ದ ಜಾತ್ರೆಗೆ ಹೋಗುವ ವಿಚಾರಕ್ಕೆ ಸಂಬಂಧಿಸಿದಂತೆ ಮಂಜುಳಾ ಹಾಗೂ ಆಕೆಯ ಪತಿ ಅನಿಲ್ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ಜಗಳದಿಂದ ತೀವ್ರ ಮನನೊಂದ ಮಂಜುಳಾ, ಸದಲಗಾ ಪಟ್ಟಣದ ಬಳಿ ಹರಿಯುತ್ತಿರುವ ದೂದಗಂಗಾ ನದಿಯ ಸೇತುವೆ ಬಳಿಗೆ ತೆರಳಿ ನದಿಗೆ ಹಾರಿದ್ದಾರೆ ಎನ್ನಲಾಗಿದೆ.
ನದಿಯ ದಡದಲ್ಲಿ ಮಂಜುಳಾ ಅವರ ಚಪ್ಪಲಿ ಹಾಗೂ ಬಟ್ಟೆಗಳು ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಹಾಗೂ ಕುಟುಂಬಸ್ಥರಲ್ಲಿ ತೀವ್ರ ಆತಂಕ ಮೂಡಿಸಿದೆ.
ಘಟನೆಯ ಸುಳಿವು ಸಿಗುತ್ತಿದ್ದಂತೆ ಸ್ಥಳಕ್ಕೆ ಧಾವಿಸಿರುವ NDRF (ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆ) ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ, ಬೋಟ್‌ಗಳ ನೆರವಿನಿಂದ ನದಿಯಲ್ಲಿ ಮಂಜುಳಾ ಅವರಿಗಾಗಿ ತೀವ್ರ ಶೋಧ ಕಾರ್ಯ ಮುಂದುವರೆಸಿದ್ದಾರೆ.
ಈ ಕುರಿತು ಸದಲಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕಾನೂನು ತನಿಖೆ ಕೈಗೊಂಡಿದ್ದಾರೆ.