ಚಿಂತಾಮಣಿ: ನಗರದ ಯುವಜನತೆಯನ್ನು ಮಾದಕ ವಸ್ತುಗಳ ವ್ಯಸನದಿಂದ ದೂರವಿಡುವ ಉದ್ದೇಶದಿಂದ ಚಿಂತಾಮಣಿ ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ, ನಗರದ ವಿವಿಧ ಜಿಮ್ (ಫಿಟ್ನೆಸ್) ಕೇಂದ್ರಗಳಿಗೆ ದಿಢೀರ್ ಭೇಟಿ ನೀಡಿ ವಿಶೇಷ ಅರಿವು ಮೂಡಿಸುವ ಕಾರ್ಯಕ್ರಮವನ್ನು ನಡೆಸಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಪೊಲೀಸರು, ಮಾದಕ ದ್ರವ್ಯಗಳ ಸೇವನೆಯಿಂದ ಉಂಟಾಗುವ ದೈಹಿಕ, ಮಾನಸಿಕ ಹಾಗೂ ಸಾಮಾಜಿಕ ದುಷ್ಪರಿಣಾಮಗಳ ಬಗ್ಗೆ ಜಿಮ್ಗೆ ಆಗಮಿಸುವ ಯುವಕರಿಗೆ ವಿಸ್ತಾರವಾಗಿ ವಿವರಿಸಿದರು. ದೈಹಿಕ ದೃಢತೆ ಬೆಳೆಸಿಕೊಳ್ಳಲು ಜಿಮ್ಗೆ ಬರುವ ಯುವಕರು ಯಾವುದೇ ಕಾರಣಕ್ಕೂ ಶಾರ್ಟ್ಕಟ್ ಅಥವಾ ಮಾದಕ ವಸ್ತುಗಳ ಜಾಲಕ್ಕೆ ಬೀಳಬಾರದು ಎಂದು ಎಚ್ಚರಿಸಿದರು.
ಅಲ್ಲದೆ, ಮಾದಕ ವಸ್ತುಗಳ ಮಾರಾಟ ಅಥವಾ ಬಳಕೆಯಂತಹ ಅಕ್ರಮ ಚಟುವಟಿಕೆಗಳು ಕಂಡುಬಂದಲ್ಲಿ ಕೂಡಲೇ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ತಿಳಿಸಲಾಯಿತು. ಸಾರ್ವಜನಿಕರು ಹಾಗೂ ಯುವಸಮುದಾಯದ ಆರೋಗ್ಯ ಮತ್ತು ಭವಿಷ್ಯವನ್ನು ರಕ್ಷಿಸುವ ನಿಟ್ಟಿನಲ್ಲಿ ಚಿಂತಾಮಣಿ ನಗರ ಪೊಲೀಸರು ಕೈಗೊಂಡ ಈ ಜಾಗೃತಿ ಅಭಿಯಾನಕ್ಕೆ ಸಾರ್ವಜನಿಕರಿಂದ ಹಾಗೂ ಜಿಮ್ ಪ್ರಿಯರಿಂದ ಉತ್ತಮ ಪ್ರಶಂಸೆ ವ್ಯಕ್ತವಾಗಿದೆ.