Skip to main content

Police Roundup

ಲಾಂಗ್ ಹಿಡಿದು ಬೆದರಿಕೆ; ಆಲ್ದೂರು ಮಾಜಿ ಯೂತ್ ಕಾಂಗ್ರೆಸ್ ಅಧ್ಯಕ್ಷನ ರೌಡಿಸಂ ವಿಡಿಯೋ ವೈರಲ್

Share News

ಚಿಕ್ಕಮಗಳೂರು: ಜಿಲ್ಲೆಯ ಆಲ್ದೂರು ಸಮೀಪದ ಐದಳ್ಳಿ ಗ್ರಾಮದಲ್ಲಿ ಹಳೇ ದ್ವೇಷದ ಹಿನ್ನೆಲೆಯಲ್ಲಿ ಮಾರಕಾಸ್ತ್ರ (ಲಾಂಗ್) ಹಿಡಿದು ಸಾರ್ವಜನಿಕವಾಗಿ ಬೆದರಿಕೆ ಹಾಕಿರುವ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಗ್ರಾಮೀಣ ಭಾಗದಲ್ಲಿ ತೀವ್ರ ಆತಂಕದ ವಾತಾವರಣ ನಿರ್ಮಾಣವಾಗಿದೆ.

​ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಶಾಸಕಿ ನಯನ ಮೋಟಮ್ಮ ಅವರ ಆಪ್ತ ಹಾಗೂ ಆಲ್ದೂರು ಯೂತ್ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ತೇಜಸ್ ಎಂಬಾತನ ವಿರುದ್ಧ ಈ ರೌಡಿಸಂ ಆರೋಪ ಕೇಳಿಬಂದಿದೆ.

 

ಐದಳ್ಳಿ ಗ್ರಾಮದ ದೇವಸ್ಥಾನವೊಂದರ ಧಾರ್ಮಿಕ ಕಾರ್ಯಕ್ರಮದ ಪೂರ್ವಸಿದ್ಧತಾ ಸಭೆಯ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಮಾಜಿ ಯೂತ್ ಕಾಂಗ್ರೆಸ್ ಅಧ್ಯಕ್ಷ ತೇಜಸ್ ಹಾಗೂ ಸ್ಥಳೀಯ ನಿವಾಸಿ ದಯಾನಂದ್ ಎಂಬುವರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಆರಂಭವಾದ ವಾಗ್ವಾದವು ನೋಡನೋಡುತ್ತಿದ್ದಂತೆಯೇ ವಿಕೋಪಕ್ಕೆ ತಿರುಗಿದೆ.

 

ಮಾತಿನ ಚಕಮಕಿ ನಡೆಯುತ್ತಿದ್ದಾಗ ದಯಾನಂದ್ ಅವರು, “ಕತ್ತಿ ಬಿಟ್ಟು ಬಾ, ನಾನೇನು ಅಂತ ನೋಡ್ತೀನಿ” ಎಂದು ಸವಾಲು ಹಾಕಿದ್ದಾರೆ. ಇದರಿಂದ ಕೆರಳಿದ ತೇಜಸ್, ತಕ್ಷಣವೇ ತನ್ನ ಕಾರಿನಲ್ಲಿದ್ದ ಮಾರಕಾಸ್ತ್ರವನ್ನು (ಲಾಂಗ್) ಹೊರಗೆ ತೆಗೆದು ದಯಾನಂದ್ ಅವರಿಗೆ ಸಾರ್ವಜನಿಕರ ಎದುರೇ ಮಚ್ಚು ತೋರಿಸಿ, ಜೀವ ಬೆದರಿಕೆ ಹಾಕಿದ್ದಾನೆ. ಈ ಭೀಕರ ದೃಶ್ಯಗಳು ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ.

 

ಸಾರ್ವಜನಿಕವಾಗಿ ಮಾರಕಾಸ್ತ್ರ ಪ್ರದರ್ಶಿಸಿ ಗೂಂಡಾವರ್ತನೆ ತೋರಿರುವ ಘಟನೆಯಿಂದ ಐದಳ್ಳಿ ಗ್ರಾಮಸ್ಥರು ಬೆಚ್ಚಿಬಿದ್ದಿದ್ದು, ಸಾರ್ವಜನಿಕರ ಸುರಕ್ಷತೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ರಾಜಕೀಯ ಮುಖಂಡರ ಹೆಸೇಳಿಕೊಂಡು ಇಂತಹ ಕೃತ್ಯ ಎಸಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಈ ಮಾರಕಾಸ್ತ್ರ ಪ್ರದರ್ಶನ ಹಾಗೂ ಬೆದರಿಕೆ ಕೃತ್ಯಕ್ಕೆ ಸಂಬಂಧಿಸಿದಂತೆ ಆಲ್ದೂರು ಪೊಲೀಸ್ ಠಾಣೆಯಲ್ಲಿ ಅಧಿಕೃತ ಪ್ರಕರಣ ದಾಖಲಾಗಿದೆ. ವೈರಲ್ ವಿಡಿಯೋ ಹಾಗೂ ಸ್ಥಳೀಯರ ಸಾಕ್ಷ್ಯಧಾರಗಳನ್ನು ಆಧರಿಸಿ ಆಲ್ದೂರು ಠಾಣೆಯ ಪೊಲೀಸರು ಮುಂದಿನ ಕಾನೂನು ಕ್ರಮ ಹಾಗೂ ತನಿಖೆಯನ್ನು ಚುರುಕುಗೊಳಿಸಿದ್ದಾರೆ.

 


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin