ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ “Rent a Boyfriend” (ಬಾಡಿಗೆಗೆ ಗೆಳೆಯ) ಎಂಬ ವಿಚಿತ್ರ ಹಾಗೂ ಆಕರ್ಷಕ ಜಾಹೀರಾತುಗಳನ್ನು ಮುನ್ನಲೆಗೆ ತಂದು ಸಾರ್ವಜನಿಕರನ್ನು ವಂಚಿಸುವ ಹೊಸ ಜಾಲವೊಂದು ಸಕ್ರಿಯವಾಗಿದೆ.
ಕಾಫಿ ಡೇಟ್, ಸಿನಿಮಾ ಅಥವಾ ಹೊರಾಂಗಣ ಸುತ್ತಾಟಕ್ಕೆ ಇಂತಿಷ್ಟು ದರ ಎಂದು ದರಪಟ್ಟಿ ಪ್ರಕಟಿಸಿ ಜನರನ್ನು ಸೆಳೆಯಲಾಗುತ್ತಿದೆ. ಆದರೆ ಈ ಆಕರ್ಷಕ ಆಫರ್‌ಗಳ ಹಿಂದೆ ದೊಡ್ಡ ಮಟ್ಟದ ಸೈಬರ್ ಅಪರಾಧ ಅಡಗಿದೆ ಎಂದು ಸೈಬರ್ ತಜ್ಞರು ಮುನ್ನೆಚ್ಚರಿಕೆ ನೀಡಿದ್ದಾರೆ.
ವಂಚನೆ ನಡೆಯುವ ಪ್ರಮುಖ ಹಂತಗಳು:
ಮುಂಗಡ ಹಣದ ವಂಚನೆ: ಬುಕಿಂಗ್ ಅಥವಾ ನೋಂದಣಿ ಹೆಸರಿನಲ್ಲಿ ಸಾರ್ವಜನಿಕರಿಂದ ಆನ್‌ಲೈನ್ ಮೂಲಕ ಮೊದಲೇ ಹಣ ಪಾವತಿಸಿಕೊಂಡು ವಂಚಿಸಲಾಗುತ್ತಿದೆ.
ವೈಯಕ್ತಿಕ ಮಾಹಿತಿ ಕಳವು: ಅಪ್ಲಿಕೇಶನ್ ಹಾಗೂ ಲಿಂಕ್‌ಗಳ ಮೂಲಕ ಖಾಸಗಿ ಫೋಟೋಗಳು, ಬ್ಯಾಂಕ್ ವಿವರಗಳು ಮತ್ತು ವೈಯಕ್ತಿಕ ಡೇಟಾವನ್ನು ಕದಿಯಲಾಗುತ್ತಿದೆ.
ಬ್ಲಾಕ್‌ಮೇಲ್ ಹಾಗೂ ಸುಲಿಗೆ: ಆನ್‌ಲೈನ್ ಸಂಭಾಷಣೆಗಳ ವೇಳೆ ಸಂಗ್ರಹಿಸಿದ ಖಾಸಗಿ ಚಿತ್ರಗಳು ಹಾಗೂ ಮಾಹಿತಿಯನ್ನು ಬಳಸಿಕೊಂಡು ನಂತರದ ದಿನಗಳಲ್ಲಿ ಬೆದರಿಸಿ ಹಣ ವಸೂಲಿ ಮಾಡಲಾಗುತ್ತಿದೆ.
ಸೈಬರ್ ಸುರಕ್ಷತೆಗೆ ಪೊಲೀಸರ ಸಲಹೆಗಳು:
ಸಾಮಾಜಿಕ ಜಾಲತಾಣಗಳ ಅನಾಮಧೇಯ ಖಾತೆಗಳಿಗೆ ಅಥವಾ ಅಪರಿಚಿತ ವ್ಯಕ್ತಿಗಳಿಗೆ ಯಾವುದೇ ಕಾರಣಕ್ಕೂ ಮುಂಗಡ ಹಣ ವರ್ಗಾಯಿಸಬೇಡಿ.
ಅನಧಿಕೃತ ಆ್ಯಪ್‌ಗಳು ಹಾಗೂ ಅನುಮಾನಾಸ್ಪದ ಲಿಂಕ್‌ಗಳಲ್ಲಿ ವೈಯಕ್ತಿಕ ಮಾಹಿತಿ ಮತ್ತು ಬ್ಯಾಂಕ್ ವಿವರಗಳನ್ನು ಹಂಚಿಕೊಳ್ಳಬೇಡಿ.
ಯಾವುದೇ ರೀತಿಯ ಸೈಬರ್ ವಂಚನೆಗೆ ಒಳಗಾದಲ್ಲಿ ತಕ್ಷಣವೇ 1930 ಉಚಿತ ಸಹಾಯವಾಣಿಗೆ ಕರೆ ಮಾಡಿ ಅಥವಾ ಅಧಿಕೃತ ವೆಬ್‌ಸೈಟ್ cybercrime.gov.in ಮೂಲಕ ದೂರು ದಾಖಲಿಸಲು ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ.