Skip to main content

Police Roundup

ದಸರಾ ಅಂಬಾರಿ ಆನೆ ‘ಅಭಿಮನ್ಯು’ವಿನ ದಂತ ಭಗ್ನ; ಆತಂಕ ಬೇಡ ಎಂದ ಅರಣ್ಯ ಇಲಾಖೆ

Share News

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಚಿನ್ನದ ಅಂಬಾರಿ ಹೊರಬಲ್ಲ ಗಜಪಡೆ ನಾಯಕ, ಕ್ಯಾಪ್ಟನ್ ಅಭಿಮನ್ಯು ಆನೆಯ ಎಡಭಾಗದ ದಂತದ ತುದಿ ಮುರಿದಿರುವ ಘಟನೆ ನಾಗರಹೊಳೆ ವಲಯದ ಮತ್ತಿಗೋಡು ಆನೆ ಶಿಬಿರದಲ್ಲಿ ನಡೆದಿದೆ.

ಮತ್ತಿಗೋಡು ಆನೆ ಶಿಬಿರದಲ್ಲಿ ಎಂದಿನಂತೆ ಮರದ ದಿಮ್ಮಿಗಳನ್ನು ಸಾಗಿಸುವ ನಿಯಮಿತ ಕೆಲಸದಲ್ಲಿ ಅಭಿಮನ್ಯು ನಿರತನಾಗಿದ್ದನು. ಈ ಸಂದರ್ಭದಲ್ಲಿ ಅನಿರೀಕ್ಷಿತವಾಗಿ ಬಲವಾದ ವಸ್ತುವೊಂದಕ್ಕೆ ತಗುಲಿ ಆನೆಯ ಎಡಭಾಗದ ದಂತದ ತುದಿ ಮುರಿದುಬಿದ್ದಿದೆ. ಗಜಪಡೆಯ ಅತ್ಯಂತ ಬಲಿಷ್ಠ ಹಾಗೂ ಹಿರಿಯ ಆನೆಗೆ ಈ ರೀತಿ ದಂತ ಭಗ್ನವಾಗಿರುವುದು ಸಾರ್ವಜನಿಕರಲ್ಲಿ ಮತ್ತು ದಸರಾ ಪ್ರೇಮಿಗಳಲ್ಲಿ ತುಸು ಆತಂಕ ಮೂಡಿಸಿತ್ತು.

 

ವಿಷಯ ತಿಳಿಯುತ್ತಿದ್ದಂತೆ ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಪಶು ವೈದ್ಯರ ತಂಡ ಅಭಿಮನ್ಯುನನ್ನು ತಪಾಸಣೆಗೆ ಒಳಪಡಿಸಿದೆ. ದಂತ ಮುರಿತದಿಂದ ಆನೆಗೆ ಯಾವುದೇ ರೀತಿಯ ಆಳವಾದ ಗಾಯಗಳಾಗಿಲ್ಲ ಹಾಗೂ ನೋವು ಇಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಸದ್ಯ ಅಭಿಮನ್ಯು ಎಂದಿನಂತೆ ಸಕ್ರಿಯನಾಗಿದ್ದು, ಆರೋಗ್ಯದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಂತದ ಕೇವಲ ಮುಂಭಾಗದ ತುದಿ ಮಾತ್ರ ಕತ್ತರಿಸಿಕೊಂಡಿರುವುದರಿಂದ ದಸರಾ ಮಹೋತ್ಸವದಲ್ಲಿ ಚಿನ್ನದ ಅಂಬಾರಿ ಹೊರಲು ಅಭಿಮನ್ಯುಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ. ಮುಂಬರುವ ದಸರೆಯಲ್ಲೂ ಆತ ಎಂದಿನ ಗಾಂಭೀರ್ಯದಿಂದಲೇ ಪಾಲ್ಗೊಳ್ಳಲಿದ್ದಾನೆ ಎಂದು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿ ಸಾರ್ವಜನಿಕರ ಆತಂಕಕ್ಕೆ ತೆರೆ ಎಳೆದಿದ್ದಾರೆ.

 


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin