ಬೆಂಗಳೂರು: ರಾಜ್ಯದಲ್ಲಿ ಈ ವರ್ಷದ ಮೊದಲ ಹಕ್ಕಿ ಜ್ವರ (H5N1) ಪ್ರಕರಣ ಪತ್ತೆಯಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಬೆಂಗಳೂರು ಹೊರವಲಯದ ಹೆಸರಘಟ್ಟ ವ್ಯಾಪ್ತಿಯ ಮುತ್ತೂರು ಗ್ರಾಮದ ಪೌಲ್ಟ್ರಿ ಫಾರಂ ಒಂದರಲ್ಲಿ ವೈರಸ್ ಕಾಣಿಸಿಕೊಂಡಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಸಾವಿರಾರು ಕೋಳಿಗಳನ್ನು ವೈಜ್ಞಾನಿಕವಾಗಿ ನಾಶಪಡಿಸಲಾಗಿದೆ.
ಹೆಸರಘಟ್ಟದ ಪೌಲ್ಟ್ರಿ ಫಾರಂನಲ್ಲಿ ಏಪ್ರಿಲ್ 14 ರಂದು ನಡೆಸಿದ ಪ್ರಾಥಮಿಕ ತಪಾಸಣೆಯಲ್ಲೇ ಕೋಳಿಗಳಿಗೆ ಹಕ್ಕಿ ಜ್ವರ ಇರುವುದು ದೃಢಪಟ್ಟಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಪಶುಸಂಗೋಪನಾ ಇಲಾಖೆ ಮತ್ತು ಜಿಲ್ಲಾಡಳಿತದ ಅಧಿಕಾರಿಗಳು, ಏಪ್ರಿಲ್ 16 ರಂದು ಫಾರಂನಲ್ಲಿದ್ದ 7,444 ಕೋಳಿಗಳನ್ನು ದೊಡ್ಡ ಗುಂಡಿ ತೆಗೆದು ಹೂಳುವ ಮೂಲಕ ನಾಶಪಡಿಸಿದ್ದಾರೆ.
ಬೇಸಿಗೆಯ ಅತಿಯಾದ ಬಿಸಿಲಿನ ತಾಪದಿಂದಾಗಿ ಹಕ್ಕಿಗಳಲ್ಲಿ ಇಂತಹ ವೈರಸ್ ಕಾಣಿಸಿಕೊಳ್ಳುವುದು ಸಾಮಾನ್ಯ. ಹೆಸರಘಟ್ಟ ಭಾಗದಲ್ಲಿ ದೊಡ್ಡ ಕೆರೆ ಇರುವುದರಿಂದ ಹಾಗೂ ಅಲ್ಲಿಗೆ ವಲಸೆ ಹಕ್ಕಿಗಳು ಬರುವುದರಿಂದ ಈ ವೈರಸ್ ಹರಡಿರಬಹುದು ಎಂದು ಶಂಕಿಸಲಾಗಿದೆ.
ಕ್ವಾರಂಟೈನ್: ಸೋಂಕಿತ ಫಾರಂನಲ್ಲಿ ಕೆಲಸ ಮಾಡುತ್ತಿದ್ದ 10 ಮಂದಿ ಕೋಳಿ ಸಾಕಣೆಗಾರರನ್ನು ಮುನ್ನೆಚ್ಚರಿಕೆ ಕ್ರಮವಾಗಿ ಕ್ವಾರಂಟೈನ್ ಮಾಡಲಾಗಿದ್ದು, ಅವರ ಆರೋಗ್ಯದ ಮೇಲೆ ನಿಗಾ ಇಡಲಾಗಿದೆ.
ಸರ್ವೇ ಕಾರ್ಯ: ಪೌಲ್ಟ್ರಿ ಫಾರಂ ಸುತ್ತಮುತ್ತಲಿನ 36 ಹಳ್ಳಿಗಳನ್ನು ಹೈ-ರಿಸ್ಕ್ ವಲಯ ಎಂದು ಗುರುತಿಸಲಾಗಿದೆ. ಅಲ್ಲದೆ, ವ್ಯಾಪ್ತಿಯಲ್ಲಿರುವ 54 ಚಿಕನ್ ಸೆಂಟರ್‌ಗಳ ಮೇಲೆ ಅಧಿಕಾರಿಗಳು ನಿಗಾ ವಹಿಸಿದ್ದಾರೆ.
ಅಧಿಕಾರಿಗಳ ಭೇಟಿ: ಪಶುಸಂಗೋಪನಾ ಇಲಾಖೆ, ಆರೋಗ್ಯ ಇಲಾಖೆ ಮತ್ತು ಜಿಲ್ಲಾಡಳಿತದ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ರೋಗ ಹರಡದಂತೆ ತಡೆಯಲು ಸ್ಥಳೀಯ ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಿದ್ದಾರೆ.
ಆರೋಗ್ಯ ಇಲಾಖೆಯು ಪೌಲ್ಟ್ರಿ ಫಾರಂ ಮಾಲೀಕರಿಗೆ ಮತ್ತು ಸಾರ್ವಜನಿಕರಿಗೆ ಮುನ್ನೆಚ್ಚರಿಕೆ ವಹಿಸಲು ಸೂಚಿಸಿದ್ದು, ಯಾವುದೇ ಅಸ್ವಸ್ಥತೆ ಕಂಡುಬಂದಲ್ಲಿ ತಕ್ಷಣ ವರದಿ ಮಾಡುವಂತೆ ತಿಳಿಸಿದೆ.
