ಮೈಸೂರು: ಹೂಟಗಳ್ಳಿ ನಗರಸಭೆ ವ್ಯಾಪ್ತಿಯ ಹಿನಕಲ್‌ನಲ್ಲಿರುವ ಇಂದಿರಾ ಕ್ಯಾಂಟೀನ್‌ಗೆ ಶಾಸಕ ಜಿ.ಟಿ. ದೇವೇಗೌಡ ಅವರ ಸಮ್ಮುಖದಲ್ಲಿ ಇಂದು ದಿಢೀರ್ ಭೇಟಿ ನೀಡಿ, ಸಮಗ್ರ ಪರಿಶೀಲನೆ ನಡೆಸಲಾಯಿತು.
ಈ ವೇಳೆ ಕ್ಯಾಂಟೀನ್‌ನಲ್ಲಿ ಸಾರ್ವಜನಿಕರಿಗೆ ಪೂರೈಸಲಾಗುತ್ತಿರುವ ಆಹಾರದ ಗುಣಮಟ್ಟ, ಅಡುಗೆಮನೆಯ ಸ್ವಚ್ಛತೆ, ನಿರ್ವಹಣೆ ಹಾಗೂ ಲಭ್ಯವಿರುವ ಮೂಲಸೌಕರ್ಯಗಳನ್ನು ಕೂಲಂಕುಷವಾಗಿ ಪರಿಶೀಲಿಸಲಾಯಿತು. ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಶುಚಿಯಾದ ಮತ್ತು ಗುಣಮಟ್ಟದ ಆಹಾರವನ್ನು ನಿಗದಿತ ಸಮಯಕ್ಕೆ ಸರಿಯಾಗಿ ವಿತರಿಸಬೇಕು ಎಂದು ಅಧಿಕಾರಿಗಳಿಗೆ ಸ್ಥಳದಲ್ಲೇ ಖಡಕ್ ಸೂಚನೆ ನೀಡಲಾಯಿತು.
ಕಾರ್ಮಿಕರು, ವಿದ್ಯಾರ್ಥಿಗಳು ಹಾಗೂ ದುಡಿಯುವ ವರ್ಗದ ಜನರಿಗೆ ಅತ್ಯಲ್ಪ ದರದಲ್ಲಿ ಪೌಷ್ಟಿಕ ಆಹಾರ ಒದಗಿಸುವ ಇಂದಿರಾ ಕ್ಯಾಂಟೀನ್‌ನ ಮೂಲ ಉದ್ದೇಶ ಸಾರ್ಥಕವಾಗಬೇಕು. ನಿರ್ವಹಣೆಯಲ್ಲಿ ಯಾವುದೇ ರೀತಿಯ ಲೋಪದೋಷಗಳಿಗೆ ಅವಕಾಶ ನೀಡದೆ, ಪರಿಣಾಮಕಾರಿಯಾಗಿ ಸೇವೆ ಒದಗಿಸಬೇಕೆಂದು ಸಿಬ್ಬಂದಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶಿಸಲಾಯಿತು.
ಪರಿಶೀಲನೆಯ ಸಂದರ್ಭದಲ್ಲಿ ಶಾಸಕರಾದ ಜಿ.ಟಿ. ದೇವೇಗೌಡ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.