ಬೆಂಗಳೂರು: ಸಿವಿಲ್ ಸ್ವರೂಪದ ಆಸ್ತಿ ವಿವಾದಕ್ಕೆ ಜಾತಿ ನಿಂದನೆ ಹಾಗೂ ಬೆದರಿಕೆಯ ಬಣ್ಣ ಬಳಿದು ದಾಖಲಿಸಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ. ಕಾನೂನು ಪ್ರಕ್ರಿಯೆಯನ್ನು ದುರುಪಯೋಗಪಡಿಸಿಕೊಂಡಿದ್ದಕ್ಕಾಗಿ ದೂರುದಾರರನ್ನು ನ್ಯಾಯಾಲಯ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.
ಆನೇಕಲ್ ತಾಲೂಕಿನ ಮಂಜುನಾಥ್ ಸೇರಿದಂತೆ ಏಳು ಜನರ ವಿರುದ್ಧ ಜಿಗಣಿಯ ಜಮೀನೊಂದಕ್ಕೆ ಸಂಬಂಧಿಸಿದಂತೆ ಸಮಾಧಿ ಕಲ್ಲು ತೆರವುಗೊಳಿಸಿ, ಜಾತಿ ನಿಂದನೆ ಮಾಡಿ ಬೆದರಿಕೆ ಹಾಕಿದ್ದಾರೆ ಎಂದು ಉಮಾ ಎಂಬ ಮಹಿಳೆ ದೂರು ನೀಡಿದ್ದರು. ಇದರನ್ವಯ ಎಸ್ಸಿ-ಎಸ್ಟಿ (ದೌರ್ಜನ್ಯ ತಡೆ) ಕಾಯ್ದೆ ಹಾಗೂ ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಎಫ್ಐಆರ್ ದಾಖಲಾಗಿತ್ತು. ಈ ಜಮೀನಿನ ವಿಚಾರ ಈಗಾಗಲೇ ಸಿವಿಲ್ ನ್ಯಾಯಾಲಯದಲ್ಲಿದೆ ಎಂದು ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಹೈಕೋರ್ಟ್ ಪ್ರಮುಖ ವೀಕ್ಷಣೆಗಳು:
ಸಿವಿಲ್ ವಿವಾದ: ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು, ಈ ವಿವಾದದ ಮೂಲವೇ ಸಿವಿಲ್ ಸ್ವರೂಪದ್ದು. ಸಿವಿಲ್ ವ್ಯಾಜ್ಯವನ್ನು ಕ್ರಿಮಿನಲ್ ಆರೋಪಗಳನ್ನು ಸೇರಿಸಿ ಕ್ರಿಮಿನಲ್ ಪ್ರಕರಣವನ್ನಾಗಿ ಬದಲಾಯಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿತು.
ಕಾನೂನಿನ ದುರುಪಯೋಗ: ಸಿವಿಲ್ ನ್ಯಾಯಾಲಯದಲ್ಲಿ ಪಡೆಯಲಾಗದ ಅನುಕೂಲವನ್ನು ಪಡೆಯಲು ಕ್ರಿಮಿನಲ್ ಕಾನೂನನ್ನು ಅಸ್ತ್ರವಾಗಿ ಬಳಸಿಕೊಳ್ಳಲು ಅವಕಾಶ ನೀಡಲಾಗುವುದಿಲ್ಲ. ಸೋಲುವ ಭೀತಿಯಿಂದ ಈ ದೂರು ನೀಡಲಾಗಿದೆ ಎಂದು ಪೀಠ ಆಕ್ಷೇಪಿಸಿತು.
ನೈಜ ಉದ್ದೇಶದ ಪರಿಶೀಲನೆ: BNSS ಸೆಕ್ಷನ್ 528ರ ಅಡಿಯಲ್ಲಿ ನ್ಯಾಯಾಲಯಗಳು ದೂರಿನ ಹಿಂದಿನ ನೈಜ ಉದ್ದೇಶ ಮತ್ತು ಸಂದರ್ಭಗಳನ್ನು ಪರಿಶೀಲಿಸಬೇಕು ಎಂದು ತಿಳಿಸಿದ ನ್ಯಾಯಪೀಠ, ಏಳೂ ಜನರ ವಿರುದ್ಧದ ಕ್ರಿಮಿನಲ್ ಪ್ರಕ್ರಿಯೆಗಳನ್ನು ವಜಾಗೊಳಿಸಿತು.