ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣ ಸಮೀಪದ ತದಡಿ ಬಂದರಿನಲ್ಲಿ ಹೂಳು ಹಾಗೂ ಸಮುದ್ರದ ಅಲೆಗಳ ಅಬ್ಬರಕ್ಕೆ ಸಿಲುಕಿ ಮೀನುಗಾರಿಕಾ ಬೋಟ್ವೊಂದು ಮುಳುಗಡೆಯಾಗಿರುವ ಘಟನೆ ಮಂಗಳವಾರ ನಡೆದಿದೆ. ಅದೃಷ್ಟವಶಾತ್ ಬೋಟ್ನಲ್ಲಿದ್ದ ನಾಲ್ವರು ಮೀನುಗಾರರು ಅಪಾಯದಿಂದ ಪಾರಾಗಿದ್ದಾರೆ.
ಸುರೇಂದ್ರ ಹರಿಕಂತ್ರ ಅವರಿಗೆ ಸೇರಿದ ‘ಲಕ್ಷ್ಮೀ ಕೃಪಾ’ ಹೆಸರಿನ ಬೋಟ್ ಮೀನುಗಾರಿಕೆಗೆ ತೆರಳಿದ್ದಾಗ ತದಡಿ ಬಂದರಿನ ಅಳವೆಯಲ್ಲಿ ತುಂಬಿಕೊಂಡಿದ್ದ ಹೂಳಿನಲ್ಲಿ ಸಿಲುಕಿಕೊಂಡಿದೆ. ಈ ವೇಳೆ ಅಪ್ಪಳಿಸಿದ ಭಾರೀ ಅಲೆಗಳ ರಭಸಕ್ಕೆ ಬೋಟ್ನ ತಳಭಾಗ ಸಂಪೂರ್ಣ ಹಾನಿಗೊಳಗಾಗಿ ಸಮುದ್ರದಲ್ಲಿ ಮುಳುಗಿದೆ. ಬೋಟ್ ಮುಳುಗುವುದನ್ನು ಗಮನಿಸಿದ ಸ್ಥಳೀಯ ಮೀನುಗಾರರು ತಕ್ಷಣವೇ ಕಾರ್ಯಪ್ರವೃತ್ತರಾಗಿ, ಬೋಟ್ನಲ್ಲಿದ್ದ ನಾಲ್ವರನ್ನು ಸಮಯೋಚಿತವಾಗಿ ರಕ್ಷಿಸಿದ್ದಾರೆ. ಘಟನೆಯಿಂದ ಸುಮಾರು 20 ಲಕ್ಷ ರೂಪಾಯಿ ಮೌಲ್ಯದ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ಒಂದೇ ವಾರದಲ್ಲಿ ಎರಡನೇ ಅವಘಡ!
ಗಮನಾರ್ಹ ಸಂಗತಿಯೆಂದರೆ, ಇದೇ ಸ್ಥಳದಲ್ಲಿ ಕೇವಲ ಎರಡು ದಿನಗಳ ಹಿಂದೆಯಷ್ಟೇ ‘ಶ್ರೀದೇವಿ’ ಎಂಬ ಮತ್ತೊಂದು ಬೋಟ್ ಮುಳುಗಡೆಯಾಗಿತ್ತು. ಇದೀಗ ಒಂದೇ ವಾರದಲ್ಲಿ ಎರಡನೇ ಬೋಟ್ ಧರಾಶಾಹಿಯಾಗಿರುವುದು ಕರಾವಳಿ ಮೀನುಗಾರರಲ್ಲಿ ತೀವ್ರ ಆತಂಕ ಮೂಡಿಸಿದೆ.
ತದಡಿ ಅಳವೆಯಲ್ಲಿ ದಶಕಗಳಿಂದ ಹೂಳು ತುಂಬಿಕೊಂಡಿದ್ದು, ಬೋಟ್ಗಳ ಸುಗಮ ಸಂಚಾರಕ್ಕೆ ಕಂಟಕವಾಗಿ ಪರಿಣಮಿಸಿದೆ. ಇನ್ನಾದರೂ ಸರ್ಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ತಕ್ಷಣವೇ ಹೂಳು ತೆರವುಗೊಳಿಸಿ, ಸುರಕ್ಷಿತ ಮೀನುಗಾರಿಕೆಗೆ ಹಾದಿ ಮಾಡಿಕೊಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.