ಬೆಂಗಳೂರು/ಬೀದರ್: ಕರ್ನಾಟಕ ಲೋಕಸೇವಾ ಆಯೋಗದ (KPSC) ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ದೆಹಲಿ ವಿಮಾನ ನಿಲ್ದಾಣದಲ್ಲಿ ಸಿಐಡಿ ಪೊಲೀಸರಿಂದ ಬಂಧಿತನಾಗಿರುವ ಬೀದರ್ ಜಿಲ್ಲೆಯ ಭಾಲ್ಕಿ ಮೂಲದ ಬಸವರಾಜ್ ಕನ್ನಾಳೆಯ ಹಿನ್ನೆಲೆ ಇದೀಗ ತನಿಖೆಯ ವೇಳೆ ಹಲವು ರೋಚಕ ಹಾಗೂ ಆಘಾತಕಾರಿ ಸಂಗತಿಗಳನ್ನು ಬಯಲಿಗೆಳೆದಿದೆ.
ಅಭ್ಯರ್ಥಿಯಿಂದ ಕೋಟ್ಯಾಧಿಪತಿಯಾಗಿ ಬೆಳೆದ ಹಾದಿ
ವರ್ಷಗಳ ಹಿಂದೆ ಸರ್ಕಾರಿ ಹುದ್ದೆ ಗಿಟ್ಟಿಸಿಕೊಳ್ಳುವ ಕನಸಿನೊಂದಿಗೆ ಕೆಪಿಎಸ್‌ಸಿ ಪರೀಕ್ಷೆ ಬರೆಯಲು ಬೆಂಗಳೂರಿಗೆ ಬಂದಿದ್ದ ಬಸವರಾಜ್ ಕನ್ನಾಳೆ, ತದನಂತರ ವ್ಯವಸ್ಥೆಯ ಲೋಪದೋಷಗಳನ್ನೇ ತನ್ನ ಅಕ್ರಮ ಸಂಪಾದನೆಗೆ ಬಂಡವಾಳ ಮಾಡಿಕೊಂಡಿದ್ದ. ಪರೀಕ್ಷಾ ಅಕ್ರಮದ ಮಧ್ಯವರ್ತಿಯಾಗಿ ಕಾರ್ಯಾಚರಿಸಲು ಆರಂಭಿಸಿದ ಈತ, ಕೆಲವೇ ವರ್ಷಗಳಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ಸಂಪಾದಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಅಧಿಕಾರಿಗಳು ಮತ್ತು ರಾಜಕಾರಣಿಗಳೊಂದಿಗೆ ಲಿಂಕ್
ಕೆಪಿಎಸ್‌ಸಿ ವ್ಯವಸ್ಥೆಯನ್ನೇ ಕರಗತ ಮಾಡಿಕೊಂಡಿದ್ದ ಬಸವರಾಜ್, ಉನ್ನತ ಮಟ್ಟದ ರಾಜಕೀಯ ನಾಯಕರು ಹಾಗೂ ಪ್ರಭಾವಿ ಅಧಿಕಾರಿಗಳೊಂದಿಗೆ ಬಲವಾದ ಸಂಪರ್ಕ ಬೆಳೆಸಿಕೊಂಡಿದ್ದ. ಈ ಪೈಕಿ ಕೆಪಿಎಸ್‌ಸಿ ಮಾಜಿ ಪರೀಕ್ಷಾ ನಿಯಂತ್ರಕ ಹಾಗೂ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಅವರೊಂದಿಗೆ ನೇರ ಸಂಪರ್ಕ ಹೊಂದಿದ್ದ ಎನ್ನಲಾಗಿದೆ. 12ಕ್ಕೂ ಹೆಚ್ಚು ಅಭ್ಯರ್ಥಿಗಳನ್ನು ನೇರವಾಗಿ ಐಎಎಸ್ ಅಧಿಕಾರಿಗೆ ಪರಿಚಯಿಸಿ, ಹುದ್ದೆ ಕೊಡಿಸುವ ಭರವಸೆಯೊಂದಿಗೆ ಲಕ್ಷಾಂತರ ರೂಪಾಯಿ ಹಣದ ಡೀಲ್ ಕುದುರಿಸಿದ್ದ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಮನೆಗಳ ಮೇಲೆ ಸಿಐಡಿ ದಾಳಿ, ತನಿಖೆ ತೀವ್ರ
ದೆಹಲಿ ವಿಮಾನ ನಿಲ್ದಾಣದಲ್ಲಿ ಆರೋಪಿಯನ್ನು ವಶಕ್ಕೆ ಪಡೆದ ಸಿಐಡಿ ಅಧಿಕಾರಿಗಳು, ಬೀದರ್ ಜಿಲ್ಲೆಯ ಭಾಲ್ಕಿಯಲ್ಲಿರುವ ಲೆಕ್ಚರ್ಸ್ ಕಾಲೋನಿ ಹಾಗೂ ದೋಣಗಾಪುರ ಗ್ರಾಮದಲ್ಲಿರುವ ಆತನ ನಿವಾಸಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ಸುದೀರ್ಘ ಶೋಧ ನಡೆಸಿದ್ದಾರೆ. ಹಗರಣದ ಬೇರುಗಳು ಮತ್ತಷ್ಟು ಆಳಕ್ಕೆ ಇಳಿದಿದ್ದು, ಪ್ರಕರಣದಲ್ಲಿ ಶಾಮೀಲಾಗಿರುವ ಇತರ ಪ್ರಭಾವಿಗಳ ಹೆಡೆಮುರಿ ಕಟ್ಟಲು ಸಿಐಡಿ ತನಿಖೆಯನ್ನು ಇನ್ನಷ್ಟು ತೀವ್ರಗೊಳಿಸಿದೆ.